Pages

Monday, June 6, 2011

ಭಾರತದ ರಾಜಕಾರಣಿಗಳ ಸಮಸ್ಯೆ

     ಬಹಳ ಹಿಂದೆ ಕೇಳಿದ ಕಥೆ.
     (ಈ ಕಥೆ ನಡೆಯುವ ಕಾಲಘಟ್ಟದಲ್ಲಿ ಸ್ಯಾಮ್ ಪಿಟ್ರೋಡಾ ಅವರಿಂದ ಭಾರತದಲ್ಲಿ ಇನ್ನೂ ಮೊಬೈಲ್ ಕ್ರಾಂತಿ ನಡೆದಿರಲಿಲ್ಲ ಎಂದು ಭಾವಿಸಬೇಕು!)

     ಒಂದು ಸಲ ಭಾರತದ ರಾಜಕಾರಣಿಯೊಬ್ಬರು ಒಂದು ಅಪಘಾತದಲ್ಲಿ ಕಾರಿನಿಂದ ಪಾರಾಗುತ್ತಾರೆ(ಬಹಳಷ್ಟು ಹಗರಣಗಳಿಂದ ಪಾರಾದಂತೆ!). ಅಲೆದಾಡುತ್ತ ಒಂದು ಗದ್ದೆಯಲ್ಲಿ ಒಬ್ಬ ರೈತನನ್ನು ಕಂಡು, 'ನಾನು ರಾಜಕಾರಣಿ, ನನಗೆ ಊಟ ಕೊಡು' ಎನ್ನುತ್ತಾನೆ. ಆದರೆ ರೈತ ಒಂದು ಶರತ್ತಿನ ಮೇಲೆ ಊಟ ನೀಡುತ್ತೇನೆನ್ನುತ್ತಾನೆ. ನನ್ನ ಗದ್ದೆಯ ಕೆಲಸ ಮಾಡಿದರೆ ಮಾತ್ರ ನಿನಗೆ ಊಟ ಎನ್ನುತ್ತಾನೆ.

    ರಾಜಕಾರಣಿ: ಏನು ಕೆಲಸ?
   
    ರೈತ: ಅಲ್ಲಿ ನೋಡು, ಗದ್ದೆಯಲ್ಲಿ ಅಲ್ಲಲ್ಲಿ ಸಗಣಿ ಗೊಬ್ಬರದ ಗುಡ್ಡೆ ಬಿದ್ದಿದೆ, ಅದನ್ನು ಎಲ್ಲ ಕಡೆ ಸಮಾನವಾಗಿ ಹರಡು.
     
    ರಾಜಕಾರಣಿ, ರೈತ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ. ರೈತನಿಗೆ ರಾಜಕಾರಣಿಯ ಕೆಲಸ ನೋಡಿ ಖುಷಿ, ಆಶ್ಚರ್ಯ ಎರಡೂ ಒಟ್ಟಿಗೆ ಆಗುತ್ತವೆ. ರೈತ ರಾಜಕಾರಣಿಗೆ ಊಟ ಕೊಡುತ್ತಾನೆ.
     
     ಮರುದಿನ ಬೆಳಿಗ್ಗೆ ರೈತ ರಾಜಕಾರಣಿಗೆ, 'ಇವತ್ತು ನಿನಗೆ ಬಹಳ ಸರಳವಾದ ಕೆಲಸ' ಎನ್ನುತ್ತಾನೆ. ರಾಜಕಾರಣಿ 'ಏನು?' ಎಂದು ಕೇಳಿದಾಗ, ರೈತ, 'ಅಲ್ಲಿ ನೋಡು, ಆಲೂಗಡ್ಡೆಗಳ ರಾಶಿ ಬಿದ್ದಿದೆ, ಅದರಲ್ಲಿ ದೊಡ್ಡ ಆಲೂಗಡ್ಡೆಗಳನ್ನು ಆ ಮೂಲೆಯ ಹತ್ತಿರ ಇಡಬೇಕು, ಸಣ್ಣ ಆಲೂಗಡ್ಡೆಗಳನ್ನು ಈ ಮೂಲೆಯ ಬಳಿ ಇಡಬೇಕು' ಎಂದು ಹೇಳಿ ಹೊರಗಡೆ ಹೋಗುತ್ತಾನೆ.
     
     ಸ್ವಲ್ಪ ಸಮಯದ ನಂತರ ರೈತ ಬಂದು ನೋಡಿದಾಗ ಆಲೂಗಡ್ಡೆಗಳು ಇದ್ದ ಜಾಗದಲ್ಲೇ ಇರುತ್ತವೆ. ರಾಜಕಾರಣಿ ಒಂದು ಮೂಲೆಯಲ್ಲಿ ಅಳುತ್ತಾ ಕುಳಿತಿರುತ್ತಾನೆ.
     
     ರೈತ: ಏನಾಯ್ತು? ಯಾಕೆ ಅಳುತ್ತಿದ್ದೀಯ?
     
     ರಾಜಕಾರಣಿ: ನೀನು ಹೇಳಿದ ಕೆಲಸ ನನಗೆ ಮಾಡಲಾಗಲಿಲ್ಲ(ಅಳು), ಕೆಲಸ ಮಾಡದಿದ್ದರೆ ನೀನು ಊಟ ಕೊಡುವುದಿಲ್ಲ(ಜೋರಾಗಿ ಅಳು)
     
     ರೈತ: ಅಲ್ಲಯ್ಯ, ನಿನ್ನೆ ಅಷ್ಟು ತ್ರಾಸದಾಯಕ ಸಗಣಿ ಗೊಬ್ಬರ ಹರಡುವ ಕೆಲಸವನ್ನು ಒಬ್ಬನೇ ಮಾಡಿದೆ ಇವತ್ತು ಇಷ್ಟು ಸರಳ ಕೆಲಸವನ್ನು ನಿನಗೆ ಮಾಡಲಾಗಲಿಲ್ಲವೆ?
     
     ರಾಜಕಾರಣಿ: ಅದು ನಿನಗೆ ಗೊತ್ತಾಗಲ್ಲ, ನಮ್ಮ ರಾಜಕಾರಣಿಗಳ ಸಮಸ್ಯೆ ನಮಗಷ್ಟೇ ಗೊತ್ತು.

     ರೈತ: ಏನು ನಿಮ್ಮ ಸಮಸ್ಯೆ?
     
     ರಾಜಕಾರಣಿ: ಅಂಥಾ ಹೊಲಸು ಹಿಡಿಸುವ ಕೆಲಸ ಯಾವುದಿದ್ದರೂ ಹೇಳು, ನಾವು ಮಾಡುತ್ತೇವೆ. ಆದರೆ ಈ ಥರಾ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾತ್ರ ನಮ್ಮಿಂದ ಆಗದ ಮಾತು!!

    ಇದು ನಮ್ಮ ಭಾರತದ ಬಹುತೇಕ ರಾಜಕಾರಣಿಗಳ ಸಮಸ್ಯೆ.

                                                                         ಇಂತಿ ಎಲ್ಲರವ, 
                                                                 ಕಾಡಸಿದ್ಧೇಶ್ವರ ಕರಗುಪ್ಪಿ 
                                                                        ಹಿಡಕಲ್ ಡ್ಯಾಮ್