Pages

Monday, December 27, 2010

ಶಿವಾಜಿ ಅಣ್ಣಾ ಕಾಗಣೇಕರ ಅವರ ಪರಿಸರಪ್ರೇಮ ಮತ್ತು ಉತ್ತರ ಕರ್ನಾಟಕದ ಕನ್ನಡ!

     ಪ್ರಸ್ತುತ ರಾಜ್ಯಸಭಾ ಸದಸ್ಯರೂ ಆಗಿರುವ ಕನ್ನಡದ ಖ್ಯಾತ ರಂಗಕರ್ಮಿಯಾಗಿರುವ ಬಿ.ಜಯಶ್ರೀಯವರು ಒಮ್ಮೆ ಹೇಳ್ತಾ ಇದ್ರು, "ನನಗ ನಮ್ಮ ಬಿ.ವಿ.ಕಾರಂತರ ಹೇಳತಿದ್ರು, ಭಾರತದಲ್ಲಿ 'ಭಾರತೀಯ ರಂಗಭೂಮಿ' ಅನ್ನೋದು ಇಲ್ವೇ ಇಲ್ಲ!, ಇಲ್ಲಿ ಇರೋದು ಕೇವಲ 'ಕನ್ನಡ ರಂಗಭೂಮಿ', 'ಮರಾಠಿ ರಂಗಭೂಮಿ' ಮುಂತಾದ ಪ್ರಾದೇಶಿಕ ರಂಗಭೂಮಿಗಳು ಮಾತ್ರ". ಅಂದರೆ ಸ್ಪಷ್ಟವಾಗಿ ಇದನ್ನೇ 'ಭಾರತೀಯ ರಂಗಭೂಮಿ' ಅಂತ ಹೇಳಲು ಆಗುವುದಿಲ್ಲ (ರಾಜ್ಯಸರ್ಕಾರ, ಕೇಂದ್ರಸರ್ಕಾರ ಎಂದು ಹೇಳಿದಂತೆ). ಇದನ್ನಿಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ, ನಮ್ಮ 'ಉತ್ತರ ಕರ್ನಾಟಕದ ಕನ್ನಡ ಭಾಷೆ' ಅನ್ನೋದೂ ಸಹ ಭಾರತೀಯ ರಂಗಭೂಮಿ ಇದ್ದಂಗನ!!. ನೀವು ನಿರ್ದಿಷ್ಟವಾಗಿ ಇದೇ ಉತ್ತರ ಕರ್ನಾಟಕದ ಭಾಷೆ ಅಂತ ಹೇಳಲಾಗುವುದಿಲ್ಲ. ಉತ್ತರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ತರಹದ 'ಉತ್ತರ ಕರ್ನಾಟಕದ ಕನ್ನಡ' ಬಳಕೆಯಲ್ಲಿದೆ. ನಮ್ಮ ಬೆಳಗಾವಿಯ ಕನ್ನಡಕ್ಕೂ ಧಾರವಾಡದ ಕನ್ನಡಕ್ಕೂ ಬಹಳ ವ್ಯತ್ಯಾಸವಿದೆ. ಅಷ್ಟೇ ಏಕೆ, ನಮ್ಮ ಬೆಳಗಾವಿ ಜಿಲ್ಲೆಯೊಂದರಲ್ಲೇ ನಾಲ್ಕೈದು ರೀತಿಯ ಕನ್ನಡ ಬಳಕೆಯಲ್ಲಿದೆ!. ಸದ್ಯಕ್ಕೆ ಈ ವಿಷಯದ ಬಗ್ಗೆ ಪ್ರಬಂಧ ಮಂಡಿಸೋ ಉದ್ದೇಶ ನನಗಿಲ್ಲ. ನಾನು ನಿಮಗೆ ತಿಳಿಸಬೇಕಿರುವುದು, 'ಶಿವಾಜಿ ಅಣ್ಣಾ ಕಾಗಣೇಕರ' ಅವರ ಬಗ್ಗೆ. ನಮ್ಮ ಡ್ಯಾಮಿನ ಎಚ್.ಡಿ.ಪಿ ಹೈಸ್ಕೂಲಿನ ಮುಖ್ಯಾಧ್ಯಾಪಕರು, ಪಕ್ಷಿತಜ್ಞರೂ ಆದ 'ಆರ್.ಜಿ.ತಿಮ್ಮಾಪೂರ' ಅವರು ನಮ್ಮ ಊರಿಗೆ ನೀನಾಸಮ್ ತಿರುಗಾಟದ ನಾಟಕಗಳನ್ನು ಕರೆಸಿದ್ದರು (ಹೆಚ್ಚಿನ ವಿವರಗಳಿಗೆ: www.ninasamtirugata.blogspot.com). ಆ ನಾಟಕಗಳ ಉದ್ಘಾಟನಾ ಸಮಾರಂಭದಲ್ಲಿ 'ಶಿವಾಜಿ ಅಣ್ಣಾ' ಅವರಿಗೆ ಸನ್ಮಾನವನ್ನು ಏರ್ಪಾಟು ಮಾಡಿದ್ದರು. ಕಳೆದ ವರ್ಷವೂ ಸಹ ನೀನಾಸಮ್ ನಾಟಕಗಳನ್ನು ಕರೆಸಿದಾಗ ನಮ್ಮ ಡ್ಯಾಮಿನ ಸಮೀಪದ 'ಬಸವಣ್ಣ ಗುಡ್ಡ'ದಲ್ಲಿ ಬಹಳಷ್ಟು ಗಿಡಗಳನ್ನು ನೆಟ್ಟು ಪೋಷಿಸಿದ 'ಬಾಳಪ್ಪಜ್ಜ' ಅವರನ್ನು ಮತ್ತು 'ಶ್ರೀ ಕೃಷ್ಣ ಪಾರಿಜಾತ'ದ ಹಿರಿಯ ಕಲಾವಿದರಾದ 'ಬಸವಣ್ಣಿ ಮಠಪತಿ'ಯವರನ್ನು ಕರೆಸಿ ಸನ್ಮಾನ ಮಾಡಲಾಗಿತ್ತು. ಈ ವರ್ಷ, ’ಶಿವಾಜಿ ಅಣ್ಣಾ ಕಾಗಣೇಕರ’ ಅವರನ್ನು ಕರೆಸಿದ್ದರು. ನಮ್ಮ ಹೈಸ್ಕೂಲಿನಲ್ಲಿ ನನಗೆ ಇಂಗ್ಲೀಷ್ ವಿಷಯವನ್ನು ಬೋಧಿಸಿದ; ಅದಕ್ಕಿಂಥ ಹೆಚ್ಚು ಪಕ್ಷಿ-ಪರಿಸರದ ಬಗ್ಗೆ ತಿಳುವಳಿಕೆ ಮೂಡಿಸಿದ 'ತಿಮ್ಮಾಪೂರ್ ಸರ್' ಅವರು, ಆ ಸಮಾರಂಭದಲ್ಲಿ ಆಡಿದ ಮಾತುಗಳನ್ನು ಇಲ್ಲಿ ನೀಡುತ್ತಿದ್ದೇನೆ. ನನ್ನ ಸ್ನೇಹಿತ ಭೀಮಸೇನನ ನೆರವಿನಿಂದ ಅದನ್ನು ರೆಕಾರ್ಡ್ ಮಾಡಿದ್ದೆ. ಅವನಿಗೆ ನನ್ನ ಧನ್ಯವಾದಗಳು.

     ('ಸಹಜತೆ' ಹಳ್ಳ ಹಿಡಿಯದಿರಲೆಂದು ಅವರ ಮಾತುಗಳನ್ನು 'ಇದ್ದದ್ದನ್ನು ಇದ್ದಹಾಗೆ' ನೀಡುತ್ತಿದ್ದೇನೆ. ಅವರ ಮಾತುಗಳ ಏರಿಳಿತಗಳನ್ನೆಲ್ಲ ಪದಗಳಲ್ಲಿ ನಿಮ್ಮ ಮುಂದೆ ಮಂಡಿಸಲಾಗದು. ಇದು ಅವರ ಭಾಷಣದ ಒಂದು ಸುಳುಹನ್ನು(glimpse) ನಿಮಗೆ ನೀಡಬಹುದೆಂದು ಭಾವಿಸಿದ್ದೇನೆ. 'ಶಿವಾಜಿ ಅಣ್ಣಾ ಕಾಗಣೇಕರ' ಅವರ ಪರಿಸರಪ್ರೇಮ, ಮಾಡಿದ ಕೆಲಸಗಳ ಬಗ್ಗೆ ನಿಮಗಿಲ್ಲಿ ಒಂದು ಸಣ್ಣ ಪರಿಚಯ ಸಿಗುತ್ತೆ. ಕೆಲವೊಮ್ಮೆ ನಮ್ಮ ಹಿಡಕಲ್ ಡ್ಯಾಮಿನಲ್ಲಿಯೂ ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ ಅನ್ನೋದು ನಿಮಗೆ ಗೊತ್ತಾಗುತ್ತೆ. ನಮ್ಮ ಡ್ಯಾಮಿನ 'ಉತ್ತರ ಕರ್ನಾಟಕದ ಭಾಷೆ' ಹೇಗಿದೆ ಅನ್ನೋದೂ ನಿಮಗೆ ಅರ್ಥ ಆಗುತ್ತೆ!)

     “ ಸಮಾಜದ ಬಗ್ಗೆ ಕಾಳಜಿಯುಳ್ಳ ಭಾಳ ಜನಾ ನಮ್ಮ ಸುತ್ತುಮತ್ತ ಅದಾರ. ಸಮಾಜದ ಪರಿವರ್ತನೆ ಬಗ್ಗೆ, ಪರಿಸರದ ಬಗ್ಗೆ ಭಾಳಷ್ಟು ಶ್ರಮಪಟ್ಟು ಕೆಲಸ ಮಾಡ್ತಿರುವಂಥಾ ಜನ ಅದಾರು, ಅಂಥಾ ಜನರನ್ನ ಈ ನಾಟಕದ ಮೂಲಕ; ಈ ಕಾರ್ಯಕ್ರಮದ ಮೂಲಕ ನಿಮಗ ಪರಿಚಯ ಮಾಡ್ಸೋವಂಥಾ ಒಂದು ಉದ್ದೇಶನೂ ನನಗೈತಿ.

     ಹೋದ ವರ್ಷ, ನಾವು 'ಬಾಳಪ್ಪ ಅಜ್ಜ' ಅಂತ ಒಬ್ಬಾವ್ನ ಕರಕೊಂಡ ಬಂದಿದ್ದು ನಾವ್. ಅಂವಾ ತನ್ನ ಪ್ರಮಾಣದೊಳಗನ, ತನ್ನ ಯೋಗ್ಯತೆಗೆ ತಕ್ಕಂಗ ಭಾಳಷ್ಟ ಗಿಡಗಳನ್ನ ಹಚ್ಚಿ ಬೆಳೆಸಿದಂಥಾ ಮನುಷ್ಯ. ಮತ್ತೊಬ್ರು, ೯೭ವರ್ಷ ಆದಂಥಾ 'ಬಸವಣ್ಣಯ್ಯಾ ಮಠಪತಿ' ಅವ್ರನ್ನ ಕರ್ಸಿದ್ದು ನಾವ್. ಹಿಂಥಾ ಜನರನ್ನ ನಿಮಗ ಪರಿಚಯ ಮಾಡಿಸೋದು ನನ್ನ ಮುಖ್ಯವಾಗಿರುವಂಥಾ ಕಾಳಜಿ.

     ಅದರಂಗನ, ಈ ವರ್ಷ 'ಶಿವಾಜಿ ಅಣ್ಣಾ' ಅವರನ್ನ ಕರ್ಕೊಂಡ ಬಂದೇವು. ಸನ್ಮಾನದ ಕಾಲಕ್ಕ ಅವ್ರ ಬಗ್ಗೆ ಒಂದೆರಡ ಮಾತುಗಳನ್ನ ಹೇಳತೇನು. ನೀವೆಲ್ಲಾರೂ ಭಾಳ ಪ್ರೀತಿಯಿಂದ, ಆಸಕ್ತಿಯಿಂದ, 'ರೊಕ್ಕಾ ಕೊಟ್ಟ' ನಾಟಕ ನೋಡಾಕ ಬಂದೇರ್ಲಾ?, ಅದ ಭಾಳ ಸಂತೋಷದ ವಿಷಯ. ನಿಮಗೆಲ್ಲರಿಗೂ ಈ ಮೂಲಕ ಸ್ವಾಗತ ಕೋರತೆನ. ಥ್ಯಾಂಕ್ಯು.

     ( ಸನ್ಮಾನದ ಕಾಲಕ್ಕೆ ಸರ್ ಆಡಿದ ಮಾತುಗಳು ಕೆಳಗಿವೆ.)

     ಬೆಳಗಾವ್ ಸಮೀಪ 'ಕಡೋಲಿ' ಅಂತ ಬರತೈತಿ, ಕಡೋಲಿ ಹಂತೇಕ 'ದೇವಗಿರಿ' ಅಂತ ಬರತೈತಿ, ದೇವಗಿರಿ ಹತ್ತಿರ 'ಕಟ್ಟಣಬಾವಿ' ಅಂತ ಬರತೈತಿ, ಅದರನಂತರ 'ಇದ್ದಿಲಹೊಂಡ' ಅಂತ ಬರತೈತಿ, 'ಗುಗ್ರೇನಟ್ಟಿ' ಅಂತ ಬರತೈತಿ. ಹಿಂಥಾ ಪ್ರದೇಶಗಳಲ್ಲಿ; ಬಹಳ ಹಿಂದುಳಿದಂತಾ ಪ್ರದೇಶಗಳನ್ನು ಅವ್ರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ದುಡ್ಯಾಕತ್ತಾರ್ ಅವ್ರ.


   ಶಿವಾಜಿ ಅಣ್ಣಾ ಕಾಗಣೇಕರ


     ಅವರ ಮುಖ್ಯವಾಗಿರುವಂಥಾ ಕಾಳಜಿ ಏನು ಅಂತಂದ್ರ, ಅಲ್ಲಿ ಉತ್ತರಭಾರತದೊಳಗ, ನಮ್ಮ 'ಚಿಪ್ಕೊ ಮೊಮೆಂಟ್', ಅಪ್ಪಿಕೋ ಚಳುವಳಿಯ ಸುಂದರ ಲಾಲ್ ಬಹುಗುಣ ಇದ್ದರ್ಲಾ?, ಅವ್ರು, ಅಲ್ಲಿ ಗಿಡಗಳನ್ನ, ಪರಿಸರವನ್ನು ರಕ್ಷಣೆ ಮಾಡೋ ಹೋರಾಟ ಪ್ರಾರಂಭ ಮಾಡಿದ್ರಲಾ?, ಸುಮಾರು ಅದೇ ಕಾಲಕ್ಕ, ಅಂದ್ರ ೧೯೭೧-೭೨ನೇ ಇಸ್ವೀಗೆ ಶಿವಾಜಿ ಅಣ್ಣಾ ಕಾಗಣೇಕರ ಏನ ಮಾಡಿದರು ಅಂತಂದ್ರ, ಕಟ್ಟಣಬಾವಿಗಿ ಬಂದ್ರು, ಅಲ್ಲಿ ಬಂದ ಏನ್ ಮಾಡಿರು ಅಂತಂದ್ರ, ಅಲ್ಲಿಯ ಎಸ್.ಎಸ್.ಎಲ್.ಸಿ ನಪಾಸಾದಂಥ ವಿದ್ಯಾರ್ಥಿಗಳನ್ನ ಕರ್ಕೊಂಬಂದ ಟ್ಯುಶನ್ ಹೇಳತಿದ್ದರು; ಆ ಟ್ಯುಶನ್ನಿಗಿ ಪ್ರತಿಯಾಗಿ ಏನ್ ಕೊಡಬೇಕು ಅಂತಂದ್ರ ಆ ಹುಡಗೋರು ಶ್ರಮದಾನ ಮಾಡಬೇಕ!. ಅವ್ರು ಏನ್ ಮಾಡಬೇಕು?, ಇವ್ರು ಒಂದು ಸಣ್ಣದಾದಂಥಾ ನರ್ಸರಿ ಸುರು ಮಾಡಿರ ಅವಾಗ. ಆ ನರ್ಸರಿ ಒಳಗ ಗೋಡಂಬಿ ಬೀಜಗಳನ್ನ ತೊಗೊಂಬರತಿದ್ರೂ, ಗೋಡಂಬಿ ಸಸಿಗಳನ್ನ ಮಾಡಿ, ಆ ಹುಡುಗರು ಮತ್ತ ಇವ್ರು ಕೂಡ್ಕೊಂಡ ಬೇರೆ ಬೇರೆ ಹೊಲಗಳಲ್ಲಿ ಆ ಗೋಡಂಬಿ ಸಸಿಗಳನ್ನ ಹಚ್ಚಾಕ ಚಾಲು ಮಾಡಿದರ. ಸುಮಾರ ೭೩-೭೪ನೇ ಇಸ್ವಿಯೊಳಗಿದ. ಆ ಗಿಡಗಳ ಎಷ್ಟು ದೊಡ್ಡದಾಗಿ ಬೆಳದ್ದಾವ ಈಗ ಅಂತಂದ್ರ, ಇವ್ರು ಹಚ್ಚಿದ ಗಿಡಗಳ್ ಅಂತ ಕಲ್ಪನಾನ ಬರಾಂಗಿಲ್ಲ. ತಾವ ಬೆಳದಂಥಾ ಗಿಡಾ ಅಂತ ಅನ್ನಸ್ಬಹುದ. ಅಷ್ಟು ದೊಡ್ಡ ಗಿಡಗಳಾಗಿ ಬೆಳದಾವ ಅವ.

     ಆ ಗಿಡಗಳ ಸಂಖ್ಯೆ ನಾ ಹೇಳಿದ್ನೀ ಅಂದ್ರ ನಿಮಗ ಆಶ್ಚರ್ಯ ಅನಸಬಹುದ. ಒಂದು ಲಕ್ಷ ಐವತ್ತು ಸಾವಿರ ಗಿಡಗಳನ್ನ ಹಚ್ಚ್ಯಾರ ಅವ್ರ!
     ತಮ್ಮ ಹೊಲ ಇಲ್ಲ, ಅವ್ರ ಹಚ್ಚಿದ ಗಿಡಗಳೆಲ್ಲ ಬೇರೆ ಹೊಲಗಳಲ್ಲಿ. ಅವ್ರ ಹೋಗಿ ಹೇಳತಿದ್ರ ಅವ್ರಿಗಿ, “ನಾ ನಿಮ್ಮ ಹೊಲದಾಗ ಇವತ್ತ ನಮ್ಮ ಹುಡಗೋರ್ನ ಕರಕೊಂದ ಬಂದ ಒಂದ ಹತ್ತ ಗ್ವಾಡಂಬಿ ಗಿಡಾ ಹಚ್ಚಿದೆನು, ಕೆಲವು ಮಾವಿನ ಗಿಡ ಹಚ್ಚಿದೆನು ಮತ್ತ ಹಲಸಿನ್ ಗಿಡ ಹಚ್ಚಿದೆನು, ದಯವಿಟ್ಟು ಅವ್ನ ಜೋಪಾನ್ ಮಾಡ್ರಿ” ಅಂತ ಹೇಳತಿದ್ರು. ಆ ರೈತರು ಅವ್ಕ ಮುಳ್ಳಿನ ಬೇಲಿಯನ್ನು ಅದು ಹಾಕಿ ಜೋಪಾನ್ ಮಾಡ್ತಿದ್ರ. ಹಿಂಗ ಬೆಳಕೊಂತ ಹೋತ ಅದ. ಕೆಲವು ಜನ ಆ ಗಿಡಾ ಕಡ್ಯಾಕ ಚಾಲು ಮಾಡಿರ ಅಲ್ಲಿ. ಗಿಡಾ ಕಡ್ಯಾಕ ಚಾಲು ಮಾಡಿದ ಮ್ಯಾಲ ಇವ್ರ ಏನ್ ಮಾಡಿರು ಅಂತಂದ್ರ, ಇಡೀ ಕಟ್ಟಣಬಾವಿ ಊರ ತುಂಬ ಎಲ್ಲಾ ರೈತರ ಇದ್ರು, ಅವರ ಮನೆಗಳಿಗೆ 'ಗ್ಯಾಸ್ ಪ್ಲಾಂಟ್' ಮಾಡಿಸಿದರ. ೩೦೦ ಗ್ಯಾಸ್ ಪ್ಲಾಂಟ್ ಆದು ಆ ಊರಾಗ. ಮನೆಯ ದನಗಳಿರ್ತಿದ್ದು, ದನಗಳ ಶಗಣಿಯನ್ನ ಹಾಕಿ ಅವ್ರು ಗ್ಯಾಸ್ ಪ್ಲಾಂಟ್ ಉಪೇಗ್ ಮಾಡಾಕತ್ರು. ಆದ್ದರಿಂದ ಗಿಡಗಳನ್ ಕಡ್ಯೂದ್ ತಪ್ಪಿ ಹೋತ ಅಲ್ಲಿ. ಗಿಡಗಳನ್ನು ಆ ಕಡೆ ಕಡ್ಯೂದ್ ಬಂದ್ ಮಾಡಿದ್ರು; ಗ್ಯಾಸ್ ಪ್ಲಾಂಟ್ ಮಾಡುವ ಮುಖಾಂತರ, ಈ ಕಡೆ ಗಿಡಗಳನ್ನು ಹಚ್ಚಾಕ್ ಚಾಲು ಮಾಡಿರ. ಹಿಂಥಾ ವಿಚಿತ್ರವಾಗಿರುವಂಥಾ ಸಂವೇದನೆ ಆಗನ ಬೆಳದಿತ್ತ ಅವರಿಗಿ, ಅಷ್ಟು ಸೇವೆ ಮಾಡಾಕತ್ರ.

     ನಂತರ ಏನ್ ಆತಂದ್ರ, ಜರ್ಮನಿಯ ವ್ಯಕ್ತಿಯೊಬ್ಬರು ಇವರ ಕೆಲಸ ನೋಡಿ,
“ಶಿವಾಜಿ ಅಣ್ಣಾ ನಿಮಗ ಏನ್ ಇನ್ನ ಕೆಲ್ಸಾ ಐತಿ?” ಅಂತಂದ್ರ.
ಇವ್ರು, “ನಾನು ದೇವಗಿರಿ ಹಂತೇಕ ಒಂದ ಕೆರಿ ಕಟ್ಟಬೇಕ ಅಂತ ಮಾಡೇನಿ, ಆ ಕೆರೀಗಿ ರೊಕ್ಕ ಬೇಕ ನನಗ” ಅಂತ ಅಂದ್ರ.
“ಎಷ್ಟ ಬೇಕ?” ಅಂತಂದ್ರ.
“ಎಷ್ಟರ ಕೊಡತೇರಿ ಕೊಡ್ರಿ” ಅಂತ ಹೇಳಿರು.
     ಆ ಕೆರಿ ಕಟ್ಟಾಕ್ ಅವ್ರ ೧೦ ಲಕ್ಷ ರುಪಾಯಿ ಇವ್ರಿಗಿ ಕೊಟ್ಟ ಹೋದರ. ಮುಂದ ಇವ್ರ ಏನ್ ಮಾಡಿದ್ರು ಅಂತಂದ್ರ, ದೇವಗಿರಿ ಮತ್ತ ಅಲ್ಲಿ ಸಮೀಪದ ಊರ ಜನರನ್ನ ಕರ್ಕೊಂಡ ಬಂದ್ರು, ಒಬ್ಬೊಬ್ರ ಮನ್ಯಾವ್ರ ಏನ್ ಮಾಡಬೇಕು ಅಂತಂದ್ರ, ಒಂದ ಚಕ್ಕಡಿ ತರಬೇಕು, ಒಬ್ಬ ಆಳ ಬರಬೇಕು. ಅವ್ರೆಲ್ಲಾ ಬಂದ ಏನ್ ಮಾಡಿದ್ರು ಅಂತಂದ್ರ ಒಂದ್ ಕೆರೆಯನ್ನ ಕಟ್ಟಿದರ. ಆ ಕೆರೆ ಈಗ ಸದ್ದೆ ಹೋಗಿ ನೋಡಬಹುದ ನೀವ. ಭಾಳ ಒಳ್ಳೆಯ ಕೆರೆ ಅದ.

     ಒಮ್ಮೆ, 'ಮದನ್ ಗೋಪಾಲ್' ಅನ್ನೋ ಬೆಳಗಾವದಾವ್ರ ಒಬ್ರು ಡೀಸಿಯವರ ಬಂದಿರ ಆ ಕೆರೆಯನ್ನ ನೋಡಾಕ.
     “ಶಿವಾಜಿ ಅಣ್ಣಾ ಎಷ್ಟ ಖರ್ಚ ಮಾಡಿರಿ ಇದಕ್ಕ?” ಅಂತ ಕೆಳಿರ.
     “ನಾ ೫ ಲಕ್ಷ ೧೦ ಸಾವಿರ ರುಪಾಯಿ ಖರ್ಚು ಮಾಡೇನ್ರಿ” ಅಂದರ ಇವ್ರು.
     “೫ ಲಕ್ಷ ೧೦ ಸಾವಿರ ರುಪಾಯಿ?? ಆಶ್ಚರ್ಯ’ ಅಂತಂದ್ರ ; ನಾ ಅಕಸ್ಮಾತ್ ಇದನ್ನ departmentದಿಂದ ಮಾಡ್ಸಿದ್ನ್ಯಂದ್ರ ೫೦ ಲಕ್ಷ ರುಪಾಯಿ ಕೆರಿ ಇದ” ಅಂತ ಅಂದರ ಅವ್ರ!. ೫೦ ಲಕ್ಷ ರುಪಾಯಿ ಕೆರೆಯನ್ನ ಇವ್ರ ಬರೇ ೫ ಲಕ್ಷದಾಗ ಮಾಡಿಕೊಟ್ರ ಇವ್ರ. ನೀವ್ ಹೋಗಿ ನೊಡ್ರಿ ಅದನ್ನ.
     ಮತ್ತ ಕಟ್ಟಣಬಾವಿಯೊಳಗ ಏನ್ ಮಾಡಿದಾರಂದ್ರ ಯಾರೂ ಬೋರ್ ವೆಲ್ ತಗ್ಯೋ ಹಂಗಿಲ್ಲ.
     ಯಾಕ? ಎಲ್ಲಾರ್ಗೂ ನೀರ ಪೂರೈಕೆ ಮಾಡತೇನ ಅಂತ ಹೇಳಿದಾರಿವ್ರ.
               ಒಂದ ’ಪಾನಿ ಪಂಚಾಯತಿ’ ಅಂತ ಒಂದ ಸಣ್ಣದ ಮಾಡಿಕೊಂಡರ ಅಲ್ಲಿ (ನೀರಿನ ಪಂಚಾಯತಿ). ಎಲ್ಲಾ ಜನರು ಕೂಡಿ ಯಾರೂ ಬೋರ್ ತಗ್ಯಾಂಗಿಲ್ಲ ಅಂತ ಒಪ್ಪಿಗೆ ಕೊಟ್ಟರ. ಮುಂದ, ಗುಡ್ಡದಿಂದ ಹರದ ಬರು ನೀರನ್ನು ಅಲ್ಲಿ ಸಣ್ಣ ಸಣ್ಣ trench(ಕಂದಕ)ಗಳನ್ನೆಲ್ಲಾ ಮಾಡಿ, plugging(ತೆಗ್ಗು) ಅದು ಮಾಡಿಕೊಂಡ್ರ. ನೀರೆಲ್ಲ ಗುಡ್ಡದ ನೆಲದೊಳಗ ಇಳೀಬೇಕದ, ಹಗರಕ ದಾಟಿ ಬರಬೇಕದ. ಅಂದರ ’ಓಡುವ ನೀರು ನಡೀಬೇಕು, ನಡಿಯು ನೀರು ನಿಲ್ಲಬೇಕು, ನಿಂತ ನೀರು ಇಂಗಬೇಕು’. ಈ ಉದ್ದೇಶದಿಂದ ಅಲ್ಲಿ ಸುತ್ತಮುತ್ತ್ ಟ್ರೆಂಚಗಳನ್ನ್ ಮಾಡಿದರು ಮತ್ತ ಚೆಕ್ ಡ್ಯಾಂಗಳನ್ನ ಕಟ್ಟಿದರು. ಈಗ ಸದ್ದೆ ಹೋಗಿ ನೋಡಿರ ಬೇಕ್ಕಾದಂತಾ ಬಿಸಲ ಇರ್ಲಿ, ’ಕಟ್ಟಣ ಬಾವಿ’ ಅಂಥಾ ಒಂದು ಎತ್ತರದ ಊರಾಗ ಯಾವಾಗ್ಲೂ ಆ ಬಾವಿಗಳಲ್ಲಿ ನೀರ ಬತ್ತುದಿಲ್ಲ. ನಾವು ನೀರಿನ ಬಗ್ಗೆ ಭಾಳ ನಿಷ್ಕಾಳಜಿ ಮಾಡಾತೇವ್ ನಾವ್, ಬೇಜವಾಬ್ದಾರಿ ಮಾಡಾಕತ್ತೇವ್ ನಾವ್, ನೀರನ್ನ ವ್ಯಯ ಮಾಡಾತೇವು, ನೀರಿನ ಬಗ್ಗೆ ಗೌರವ ಇಲ್ಲ ನಮಗ. ನಮ್ಮ ಹಳೆ ಬಾವಿಗಳನ್ನ ನೋಡ್ರಿ, ನಮ್ಮ ತಲೆಮಾರಿನ ಜನರೆಲ್ಲಾ ಎಷ್ಟು ದೊಡ್ಡದಾದ ಛಂದ ಛಂದ ಬಾವಿಗಳನ್ನ ನೋಡಿ ಅಲ್ಲಿ ನೀರ ಜಗ್ಗತಿದ್ದು ನಾವ. ಈಗ ನೋಡ್ರಿ ಬಾವಿಗಳನ್ನ, ಒಂದೂ ಬಾವ್ಯಾಗ ನೀರಿಲ್ಲ, ಅಂತರ್ಜಲಾ ಪೂರ್ಣ ಹೋಗಿಬಿಟ್ಟೈತಿ. ಆದರ ಕಟ್ಟಣ ಬಾವ್ಯಾಗ ಅಂತರ್ಜಲ ಐತಿ;  ’ಅಲ್ಲಿ ಅಂತರ್ಜಲಾ ಯಾಕ ಐತಿ?’ ಅಂತಂದ್ರ ಅಲ್ಲಿ ’ಶಿವಾಜಿ ಅಣ್ಣಾ’ ಅದಾನ್ ಅಲ್ಲಿ. ಈಗ್ ಊರ್ ಊರಿಗಿ ’ಶಿವಾಜಿ ಅಣ್ಣಾ’ಗೋಳ ಬೆಳಿಬೇಕ. ಒಮ್ಮೇ ಡಾಕ್ಟರ್ ನಾಗಲೋಟಿಮಠ ಸರ್(ಬೆಳಗಾವಿಯ ಡಾ.ಎಸ್.ಜೆ.ನಾಗಲೋಟಿಮಠ) "ಶಿವಾಜಿ ನೀ ಇನ್ನ ಮುಂದ ಗಿಡಾ ಬೆಳಸಬ್ಯಾಡಾ" ಅಂತಂದ್ರ!, ಇವ್ರ "ಯಾಕ್ರೀ?" ಅಂತಂದ್ರ. ಅವಾಗ ಅವ್ರ, "ಇನ್ನಮುಂದ ಗಿಡಾ ಬೆಳಸಯಾಡಾ. ’ಶಿವಾಜಿ’ಗೋಳ್ನ ಬೆಳಸ!" ಅಂತ ಹೇಳಿದ್ರ.

     ನಿಮಗ ಪರಿಸರಪ್ರೇಮ ಬೆಳಿಬೇಕ ಅಂತಿದ್ರ, ಶಿವಾಜಿ ಹಂಥಾ ಜನಾ ನಿಮಗ ಪರಿಚಯ ಆಗಬೇಕ. ನಾವು ಹೋದ ವರ್ಷ ನಮ್ಮ ಮಕ್ಕಳಿಗೆ ಒಂದು ಕಾರ್ಯಕ್ರಮ ಮಾಡಿದ್ದು, ಅದರಾಗ ಶಿವಾಜಿ ಅಣ್ಣಾ ಬಂದಿದ್ರ, ಅವ್ರ ಬಂದ ಏನ್ ಮಾಡಿದ್ರು ಅಂತಂದ್ರ ಮಕ್ಕಳಿಗೆಲ್ಲಾ ಪರಿಸರದ ಬಗ್ಗೆ ಭಾಳ ಒಳ್ಳೆಯ ಜಾಗ್ರತಿಯನ್ನ ಮೂಡಿಸಿ ಹೋಗಿದ್ರ ಅವ್ರ. ಹಿಂಥಾ ಅದ್ಭುತ ವ್ಯಕ್ತಿಗಳು ಅವ್ರ.


ಆರ್.ಜಿ.ತಿಮ್ಮಾಪೂರ


     ಮುಂದ,.. ಈಗ ಸನ್ಮಾನ ಮಾಡಾಕತ್ತೇವ್ ನಾವ್ ಅವರಿಗಿ. ನಮ್ಮ ಸನ್ಮಾನ್ ಏನ್ ಭಾಳ್ ದೊಡ್ಡದ ಅಲ್ಲ.'ದಶಾವತಾರ' ಅಂತ ಒಂದ ನಾಟಕ್ ಇತ್ತ್ ಬೆಳಗಾವದಾಗ, ಗೋವಾದಾವರ ತೊಗೊಂಡ ಬಂದಿದ್ರ. ಆ ನಾಟಕ ನೋಡಾಕ ಬಂದಾವ್ರ ಎಷ್ಟ ಜನಾ ಇದ್ರ ಅಂದ್ರ ೫೦೦೦ ಜನ ಇದ್ದರ ಅಲ್ಲಿ. ಒಂದೊಂದ ಟಿಕೀಟಿಗಿ ನಾಕ ನಾಕ್ ನೂರ್ ರುಪಾಯಿ; ಅಂದ್ರ, ಸುಮಾರ ಇಪ್ಪತ್ತ ಲಕ್ಷ ರುಪಾಯಿ collection ಆಗಿರತೈತಿ ಹಂಥಾ ನಾಟಕದಾಗ. ಹಂಥಾ ನಾಟಕದಾಗ ಇವ್ರನ್ನ ಕರದ, ಒಂದ ಐದಾರ ಸಾವಿರ ರೂಪಾಯೀದ ಒಂದ ಒಳ್ಳೆಯ 'ಶಾಲ' ಹಾಕಿ, ಹಣ್ಣು ಹಂಪಲ ಕೊಟ್ಟ ನಮಸ್ಕಾರ ಮಾಡಿರ ಇವ್ರಿಗಿ. ಆ 'ಶಾಲ್' ಒಂದೂ ಇವ್ರ ಮನಿಗಿ ಹೋಗಲಿಲ್ಲ ಅವ. ಊರಿಗಿ ಹೋಗೋವಾಗ ದಾರ್ಯಾಗ ಹುಡಗೋರ ಭೆಟ್ಟಿ ಆದರು, 'ಏ ತಮ್ಮ ಈ ಹಣ್ಣ ತೊಗೋಪಾ' ಅಂತ ಹುಡಗೋರಿಗಿ ಕೊಟ್ಟ ಹೋದರ, ಆ ತಾಟ ಇತ್ತಲಾ? ಒಬ್ಬ ಯಾರೋ ಹೆಣ್ಣ ಮಗಳ ಬಂದಳು, 'ಏ ಆಯಿ, ತೊಗೋ ಈ ತಾಟ', ಒಬ್ಬ ಯಾರೋ ಮುದಕ ಬಂದಾ, 'ಏ ದಾದಾ, ತೊಗೊ ಇದನ', ಶಾಲ್ ಹೋತ. ಹಿಂಗ ನಾವ ಕೊಟ್ಟಂಥಾ ಎಲ್ಲಾ ವಸ್ತುಗಳೂ ಅವ್ರು ಮನಿಗಿ ಹೋಗಿ ಮುಟ್ಟುಗುಡದ ಒಂದೂ ಇರುದಿಲ್ಲ ಅವ್ರ ಹಂಥೇಕ!. ನಿಜವಾದ ತ್ಯಾಗ ಇದ, ನಿಜವಾದ 'ನಿಸ್ವಾರ್ಥ ಸೇವೆ' ಅಂತಂದ್ರ ಇದ. ಒಂದೂ ತಮ್ಮ್ಮ ಕೆಲಸಕ್ಕ ಇಟ್ಟಕೊಳ್ಳೂದ ಇಲ್ಲ ಅವ್ರ. ನಾವ ಲಾಸ್ಟ ಟೈಮ್ ನಮ್ಮ ಶಾಲಿಗಿ ಬಂದಾಗ, 'ನೀವ ಬಂದಿದ್ದ ಚೊಲೊ ಆತ್ರೀ' ಅಂತ ಹೇಳಿ ಒಂದ ೫೦೦ ರುಪಾಯಿ ಕೊಟ್ಟಿದ್ದು ನಾವ. ಅವ್ರ ಊರಾಗ ಒಂದ ಶಿಕ್ಷಣ ಸಂಸ್ಥೆ ಐತಿ, ಆ ಶಾಲಿಗಿ ಆ ೫೦೦ ರುಪಾಯಿ ದೇಣಿಗೆ ಕೊಟ್ಟ, ಆ ರಸೀಟ್ ನನಗ ಕೊಟ್ಟ ಕಳಸಿದ್ರ ಅವ್ರ!.

     ಹಿಂಗ,... ಹಿಂಥಾವ್ರ ಅದಾರ ಇನ್ನ. ಖಂಡಿತವಾಗಿ ಹಿಂಥಾ ಜನ ಅದಾರ. ಆ ಜನರ ಪರಿಚಯ ನಿಮಗ ಆಗಬೇಕು, ಅವರಿಂದ ಈ ಮಕ್ಕಳ ಅದೇರ್ಲ್ಯಾ?, ನಮ್ಮ ಹೈಸ್ಕೂಲ್ ಮಕ್ಕಳು ಮತ್ತ ಹೊರಗಿನ ಮಕ್ಕಳಾಗಲಿ ಅವರಿಂದ ಸ್ಪೂರ್ತಿ ಪಡಿಬೇಕು, ಹಂಥಾವ್ರ ದಾರಿಯೊಳಗ ನಡಿಬೇಕು, ಪರಿಸರದ ಬಗ್ಗೆ ಪ್ರೇಮ ಬೆಳಸಕೋಬೇಕು; ಅಂದ್ರ ನೀವ್ 'ನಿರಾಶ' ಆಗೋದು ಅವಶ್ಯ ಇಲ್ಲ, ಇನ್ನ ಓಳ್ಳೆಯ ಜನ ಅದಾರು, ಒಳ್ಳೆಯ ಕಾರ್ಯಗಳ್ ನಡೀತಾವು, ಭವಿಷ್ಯ ಅಷ್ಟ ಭಯಾನಕ ಇಲ್ಲ, ಅಪಾಯಕಾರಿ ಇಲ್ಲಾ, ಯಾಕಂದ್ರ ಶಿವಾಜಿ ಅಣ್ಣಾನಂತಾವ್ರ ಇನ್ನ ಇರತಾರ. ಅವ್ರ ಸಂಖ್ಯೆ ಹೆಚ್ಚಿಗೆ ಆಗಲಿ, ಅವ್ರ ಪರಿಚಯ ನಿಮಗ ಆಗಲಿ ಅಂಥೇಳಿ ಅವರನ್ನ ನಾ ಕರಿಸಿದೇನು. ನಮ್ಮ ಮನ್ನಣೆಗೆ ಓಗೊಟ್ಟು ಬಂದಾರ ಅವ್ರು. ಅವ್ರನ್ನ ನಮ್ಮ ಮಲ್ಲಯ್ಯ ಅಜ್ಜಾವ್ರು( ನಮ್ಮ ಹಿಡಕಲ್ ಡ್ಯಾಮಿನ ಸಮೀಪದ ಘೋಡಗೇರಿ ಮಠದ ಸ್ವಾಮಿಗಳು) ಮತ್ತ ವೇದಿಕೆಯ ಮೇಲಿನ ಇತರ ಗಣ್ಯರು ಸನ್ಮಾನ ಮಾಡಲಿ ಅಂಥೇಳಿ ನಿಮ್ಮೆಲ್ಲರ ಪರವಾಗಿ ಕೇಳಿಕೋತೆನ.”
     ನೀನಾಸಮ್ ನಾಟಕಗಳನ್ನು ನಮ್ಮ ಡ್ಯಾಮಿಗೆ ಕರೆಸಿದ್ದಕ್ಕಾಗಿ ಮತ್ತು ಶಿವಾಜಿ ಅಣ್ಣಾ ಕಾಗಣೇಕರ ಅವರನ್ನು ನಮಗೆ ಪರಿಚಯಿಸಿದ್ದಕ್ಕಾಗಿ 'ತಿಮ್ಮಾಪೂರ್ ಸರ್' ಅವರಿಗೆ ನನ್ನ ಧನ್ಯವಾದಗಳು.ಓದಿ ನಿಮಗೆ ಏನನ್ನಿಸಿತು?ತಿಳಿಸಿ.
                                                                     ಇಂತಿ ಎಲ್ಲರವ,
                                                              ಕಾಡಸಿದ್ಧೇಶ್ವರ ಕರಗುಪ್ಪಿ,
                                                                     ಹಿಡಕಲ್ ಡ್ಯಾಂ