Pages

Sunday, April 17, 2011

ನನ್ನ ಬ್ಲಾಗಿನಲ್ಲಿ ಎಸ್.ಎಲ್.ಭೈರಪ್ಪನವರು!

     ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಲ್ಲೂ ಕೆಲವೊಂದು ಕನ್ನಡ ದಿನಪತ್ರಿಕೆಯವರು ಉಚಿತವಾಗಿ ತಮ್ಮ ಪತ್ರಿಕೆಗಳನ್ನು ವಿತರಿಸುತ್ತಾರೆ. ಅದೇ ರೀತಿ ಕಳೆದ ತಿಂಗಳು ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲೂ ಕೆಲವು ಕನ್ನಡ ಪತ್ರಿಕೆಗಳನ್ನು ವಿತರಿಸುತ್ತಿದ್ದರು. ಅವನ್ನು ತೆಗೆದುಕೊಂಡು ನಂತರ ಓದಿದರಾಯಿತು ಅಂತ ಇಟ್ಕೊಂಡಿದ್ದೆ. ಹಾಗೆ ತೆಗೆದುಕೊಂಡ ಪತ್ರಿಕೆಗಳ ಜೊತೆ ವಿಶ್ವ ಕನ್ನಡ ಸಮ್ಮೇಳನದ ನಿಮಿತ್ತ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯವರು ಹೊರತಂದಿದ್ದ ನೂರು ಪುಟಗಳ ವಿಶೇಷ ಪುಸ್ತಕ 'ಕನ್ನಡ ಕಲರವ'ವೂ ಇತ್ತು. ಅವತ್ತು ಅದನ್ನುತೆಗೆದು ಅದರಲ್ಲಿನ ಫೋಟೋಗಳನ್ನು ನೋಡಿ ನಂತರ ಅದನ್ನು ಓದಿದರಾಯಿತು ಅಂತ ಇಟ್ಟಿದ್ದೆ. ಅದನ್ನು ಮೊನ್ನೆ ತೆಗೆದು ನೋಡುತ್ತಿದ್ದಾಗ ಅದರಲ್ಲಿ ಪ್ರಕಟವಾದ ಎಸ್.ಎಲ್.ಭೈರಪ್ಪನವರ ಜೊತೆಗಿನ ಸಂವಾದ ನನಗೆ ಬಹಳ ಹಿಡಿಸಿತು. ಅದರ ಲಿಂಕ್ ಏನಾದರು ಸಂಯುಕ್ತ ಕರ್ನಾಟಕದ ವೆಬ್ ಸೈಟಲ್ಲಿ ಅಥವಾ ಎಸ್.ಎಲ್.ಭೈರಪ್ಪನವರ ವೆಬ್ ಸೈಟಲ್ಲಿ ಸಿಗುತ್ತದೋ ಅಂತಾ ನೋಡಿದೆ. ಸಿಗಲಿಲ್ಲ. ಹೀಗಾಗಿ ಅದನ್ನು ನಾನೇ ನನ್ನ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದುಕೊಂದು ನನ್ನ 'ವದನಹೊತ್ತಿಗೆ(facebook)'ಯ ಮಿತ್ರರು, ಸಂಯುಕ್ತ ಕರ್ನಾಟಕದ ವ್ಯಂಗ್ಯ ಚಿತ್ರಕಾರರು ಆದ ಡಾ.ಸತೀಶ್ ಶೃಂಗೇರಿಯವರಿಗೆ ಒಂದು ಮೆಸೇಜ್ ಕಳಿಸಿ, 'ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದಿದ್ದೇನೆ, ಇದಕ್ಕೆ copy rights ನಿಯಮಗಳೇನಾದರೂ ಅಡ್ಡಿಯಾಗತ್ತವೆಯೇ? ತಿಳಿಸಿ' ಎಂದು ಕೇಳಿದ ತಕ್ಷಣ, ಅವರು ಸಂಯುಕ್ತ ಕರ್ನಾಟಕದ ಸಂಪಾದಕರನ್ನು ಸಂಪರ್ಕಿಸಿ ನನಗೆ 'ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬಹುದು ಮುಂದುವರೆಯಿರಿ' ಎಂದು ಗ್ರೀನ್ ಸಿಗ್ನಲ್ ಕೊಟ್ಟರು!ಹೀಗಾಗಿ ಎಸ್.ಎಲ್.ಭೈರಪ್ಪನವರು ನನ್ನ ಬ್ಲಾಗ್ ಪ್ರವೇಶಿಸಲು ಪ್ರಮುಖ ಕಾರಣ ಸತೀಶ್ ಶೃಂಗೇರಿಯವರು! 'ಕನ್ನಡ ಕಲರವ' ಸಂಚಿಕೆಯಲ್ಲಿ ಅನೇಕ ಚಿತ್ರಗಳನ್ನು, ವ್ಯಂಗ್ಯ ಚಿತ್ರಗಳನ್ನು ರಚಿಸಿರುವುದರ ಜೊತೆಗೆ ಖ್ಯಾತ ವ್ಯಂಗ್ಯ ಚಿತ್ರಕಾರ, ಕನ್ನಡಿಗ ಆರ್.ಕೆ.ಲಕ್ಷ್ಮಣ್ ಅವರ ಚಿಕ್ಕ-ಚೊಕ್ಕ ವ್ಯಕ್ತಿಚಿತ್ರವನ್ನು ಸತೀಶ್ ಶೃಂಗೇರಿಯವರು ಬರೆದಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅದೇ ರೀತಿ ಭೈರಪ್ಪನವರ ಜೊತೆ ಸಂವಾದ ನಡೆಸಿದ ವಿ.ಎನ್.ಸುಬ್ಬರಾವ್, ಹುಣಸವಾಡಿ ರಾಜನ್, ಎಚ್.ಎಸ್.ನಾರಾಯಣಮೂರ್ತಿ ಮತ್ತು ಜಿ.ಅನಿಲ್ ಕುಮಾರ್ ಅವರಿಗೆ ನನ್ನ ಧನ್ಯವಾದಗಳು. 'ಕನ್ನಡ ಕಲರವ' ವಿಶೇಷ ಸಂಚಿಕೆ ಪ್ರಕಟಿಸಿದ್ದಕ್ಕಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು. ಎಸ್.ಎಲ್.ಭೈರಪ್ಪನವರಿಗೂ ಪ್ರೀತಿಪೂರ್ವಕ ಧನ್ಯವಾದಗಳು.
     ಕನ್ನಡ ಸಮ್ಮೇಳನ ಅಂತ ಕನ್ನಡ ಅಂದ್ರೆ ಹಾಗೆ, ಕನ್ನಡ ಅಂದ್ರೆ ಹೀಗೆ ಅಂತ ಪುಂಖಾನುಪುಂಖವಾಗಿ ಮಾತನಾಡೋ ಅನೇಕ ಸಾಹಿತಿಗಳಿದ್ದಾರೆ.ಕನ್ನಡದ ಬಹುತೇಕ ಖ್ಯಾತ ಸಾಹಿತಿಗಳ ಮಾತುಗಳನ್ನು ಅವರು quote ಮಾಡಬಲ್ಲರು. ಅದನ್ನು ತೆಗೆದುಕೊಂಡು ಮಾಡೋದೇನು? ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ ಬೆಳಗಾವಿ ನಮ್ಮದು ಅಂತ ಕಿರುಚಿ,ಕಿತ್ತೂರು ಚೆನ್ನಮ್ಮ,ಸಂಗೊಳ್ಳಿ ರಾಯಣ್ಣನಿಗೆ ಜೈಕಾರ ಹಾಕಿ ಎದ್ದು ಹೋದರೆ ಅದರಿಂದ ಏನು ಪ್ರಯೋಜನ?! ನಮ್ಮ ಕನ್ನಡ-ಕರ್ನಾಟಕಕ್ಕೆ ಅತ್ಯಂತ ತ್ವರಿತವಾಗಿ ಆಗಬೇಕಾಗಿರುವುದೇನು, ನಮ್ಮತನವನ್ನು ಉಳಿಸಿಕೊಳ್ಳಲು ನಾವು ಮಾಡಬೇಕಿರುವುದೇನು ಎಂಬ ಬಗ್ಗೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.ಕೇಳಿ.ನಿಮಗಿಷ್ಟವಾಗಬಹುದು.

                                                                                      ಇಂತಿ ಎಲ್ಲರವ,
                                                                                  ಕಾಡಸಿದ್ಧೇಶ್ವರ ಕರಗುಪ್ಪಿ
                                                                                       ಹಿಡಕಲ್ ಡ್ಯಾಂ

0 comments:

Post a Comment