Pages

Tuesday, March 8, 2011

ಬನ್ನಿ ಬೆಳಗಾವಿಗೆ! ಕನ್ನಡೋತ್ಸವಕ್ಕೆ!!


     ಅಂತೂ ಇಂತೂ 'ನಮ್ಮ ಬೆಳಗಾವಿ'ಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ! 'ಇನ್ಫೋಸಿಸ್'ನ ಎನ್.ಆರ್.ನಾರಾಯಣ ಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು ನನಗಂತೂ ಖುಶಿಯಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ಯಾವುದೇ ಕನ್ನಡಿಗ ಸಹ ಕನ್ನಡ ಸಮ್ಮೇಳನ ಉದ್ಘಾಟಿಸಲು ಅರ್ಹ ಅನ್ನೋದು ನನ್ನ ಅಭಿಪ್ರಾಯ. ಪ್ರತೀ ಸಾಹಿತ್ಯ ಸಮ್ಮೇಳನಗಳಲ್ಲಂತು ಬರೀ ಸಾಹಿತಿಗಳದೇ ದರ್ಬಾರು, ಇನ್ನು ವರ್ಷಪೂರ್ತಿ ಸಭೆ ಸಮಾರಂಭಗಳಲ್ಲೇ ಜೀವನ ಸಾಗಿಸೋ ರಾಜಕಾರಣಿಗಳು, ಮಠಾದೀಶರನ್ನೂ ನೋಡಿ ನೋಡಿ ಸಾಕಾಗಿ ಹೋಗಿದೆ. ಕೆಲವೇ ಕೆಲವು ಮಠಾದೀಶರು, ರಾಜಕಾರಣಿಗಳನ್ನು ಬಿಟ್ಟರೆ ಬಹುತೇಕರದ್ದು ಅದೇ ಹಳಸಲು, ಬೋರಿಂಗ್ ಭಾಷಣ. ಹೀಗಾಗಿ ಇವರನ್ನು ಹೊರತುಪಡಿಸಿದವರೊಬ್ಬರು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ. ಇನ್ನು ನಾರಾಯಣ ಮೂರ್ತಿಗಳಿಗಿರುವ ಜಾಗತಿಕ ಮನ್ನಣೆಯಿಂದ ಸಮ್ಮೇಳನಕ್ಕೆ ತಕ್ಕ ಮೀಡಿಯಾ ಕವರೇಜೂ ಸಿಗುತ್ತದೆ. ಮತ್ತು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಐಶ್ವರ್ಯ ರೈ ಬಚ್ಚನ್ ಅವರ ಆಗಮನವಾಗಲಿದೆ!

'ವೀರ ಸೌಧ' ದಿಂದ ಮೆರವಣಿಗೆ:
  'ವೀರ ಸೌಧ' ಬೆಳಗಾವಿಯ ಐತಿಹಾಸಿಕ ಸ್ಥಳಗಳಲ್ಲೊಂದು. ೧೯೨೪ರಲ್ಲಿ ೩೯ನೇ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಇಲ್ಲಿಯೇ. ಮಹತ್ಮಾ ಗಾಂಧೀಜಿಯವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದು ಒಂದೇ ಸಲ. ಹೀಗಾಗಿ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ಎಂಬ ಖ್ಯಾತಿಗೆ ಈ ಸ್ಥಳ ಪಾತ್ರವಾಗಿದೆ. ಸಮ್ಮೇಳನಕ್ಕೆಂದು ತೆಗೆದ ನೀರಿನ ಬಾವಿಯನ್ನು ಕಾಂಗ್ರೆಸ್ ಬಾವಿಯೆಂದೇ ಕರೆಯುತ್ತಾರೆ(ಬಿ.ಜೆ.ಪಿಯವರೂ ಸಹ!).ಮಹತ್ಮ ಗಾಂಧಿಯವರ ಜೊತೆ ಮೊತಿಲಾಲ್ ನೆಹರು, ಜವಾಹರಲಾಲ್ ನೆಹರು, ಅನ್ನಿ ಬೆಸಂಟ್, ವಲ್ಲಭ ಭಾಯ್ ಪಟೇಲ್ ಮುಂತಾದವರಿದ್ದರು(ಅವತ್ತಿನ ಕಾಂಗ್ರೆಸ್ಸೇ ಹಾಗಿತ್ತು!). ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಸಹ ಇಲ್ಲಿನ ಐತಿಹಾಸಿಕ ಘಟನೆ.

      ಸಮ್ಮೇಳನದ ಪ್ರಧಾನ ಆಕರ್ಷಣೆ ಮಾರ್ಚ್ ೧೧ರಂದು ನಡೆಯುವ ಮೆರವಣಿಗೆ ಆಗಲಿದೆ. ಬೆಳಿಗ್ಗೆ ೧೦ ಗಂಟೆಗೆ 'ವೀರ ಸೌಧ'ದಿಂದ ಉದ್ಘಾಟಣಾ ಮೆರವಣಿಗೆ ಹೊರಡಲಿದೆ. ಪ್ರತಿ ಜಿಲ್ಲೆಯಿಂದ ಒಂದು ಸ್ಥಬ್ಧ ಚಿತ್ರ, ಬೆಳಗಾವಿ ಜಿಲ್ಲೆಯ ಹಿರಿಮೆ ಸಾರುವ ಐದು ಸ್ಥಬ್ಧಚಿತ್ರಗಳು, ಜನಪದ ಕಲಾ ತಂಡಗಳು, ಕನ್ನಡ ಚಲನಚಿತ್ರ ರಂಗದ ೫೦೦ ಜನ ಕಲಾವಿದರು, ನಟ-ನಟಿಯರ ಸಹಿತ ಒಂಭತ್ತು ಸ್ಥಬ್ಧಚಿತ್ರಗಳು, ಮೈಸೂರು ದಸರಾದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತ 'ಬಲರಾಮ'ನ ನೇತ್ರತ್ವದಲ್ಲಿ ಆನೆ, ಕುದುರೆ , ಒಂಟೆಗಳು, 'ಪೋಲೀಸ್  ಬ್ಯಾಂಡ್'ಗಳು, ೧೦೮ ಎತ್ತಿನ ಗಾಡಿಗಳು, ೧೦೦೮ ಮಂದಿ ಪೂರ್ಣ ಕುಂಬ ಹೊತ್ತ ಮಹಿಳೆಯರು! ಎಲ್ಲ ಒಟ್ಟಿಗೆ ಹೆಜ್ಜೆ ಹಾಕುಲಿದ್ದಾರೆ. ಹೀಗಾಗಿ ಉದ್ಘಾಟಣಾ ಮೆರವಣಿಗೆ ವೈಭವೋಪೇತವಾಗಿ, ಅವಿಸ್ಮರಣೀಯವಾಗಿ ನೆರವೇರುವುದರಲ್ಲಿ ಸಂಶಯವಿಲ್ಲ. ಯಾವುದೇ ಪ್ರಚಾರ, ಆಹ್ವಾನಗಳಿಲ್ಲದಿದ್ದರೂ ಪ್ರತೀ ವರ್ಷ ರಾಜ್ಯೋತ್ಸವದಲ್ಲಿ ಬೆಳಗಾವಿಯಲ್ಲಿ ಸಾವಿರಾರು ಜನ ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಸೇರುತ್ತಾರೆ. ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೈಗೊಂಡಿರುವಾಗ ಯಾವ ಪ್ರಮಾಣದಲ್ಲಿ ಜನ ಸೇರಬಹುದೆಂಬುದನ್ನು ಯಾರಾದರೂ ಊಹಿಸಬಹುದು.
ಬೆಳಗಾವಿಯ ಗೋಡೆಗಳನ್ನೆಲ್ಲ ಅದ್ಭುತವಾಗಿ ಅಲಂಕರಿಸಿದ ಕಲಾವಿದರಿಗೆಲ್ಲ ಸಲಾಂ 


ಪುಸ್ತಕ ಪ್ರದರ್ಶನ:
     ನಾನು ಕಾತರದಿಂದ ಕಾಯುತ್ತಿರುವುದು ಪುಸ್ತಕ ಪ್ರದರ್ಶನಕ್ಕೆ. ಬೆಳಗಾವಿದೆ ವಿಧಾನ ಸೌಧ ಬಂದರೂ ಒಂದು ಸುಸಜ್ಜಿತ ಕನ್ನಡ ಪುಸ್ತಕ ಮಳಿಗೆ ಇಲ್ಲದಿರುವುದು ದೊಡ್ದ ದುರಂತ! ಪುಸ್ತಕ ಪ್ರದರ್ಶನ ನಮ್ಮ ಆರ್.ಎಲ್.ಎಸ್ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಲಿದೆ.
ಪ್ರಧಾನ ವೇದಿಕೆಯ ಮಾದರಿ 


ಅಂತಿಮ ಹಂತದಲ್ಲಿ ಪ್ರಧಾನ ವೇದಿಕೆಯ ಸಿದ್ಧತೆ 

ಪ್ರವಾಸ :
     ಬೆಳಗಾವಿ ನಗರದಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳೆಂದರೆ ವೀರಸೌಧ, ಕೋಟೆ ಪ್ರದೇಶದಲ್ಲಿರುವ ರಾಮಕ್ರಿಷ್ಣ ಮಿಶನ್ ಆಶ್ರಮ (೧೮೯೨ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮೊದಲನೇ ದಕ್ಶಿಣ ಭಾರತದ ಪ್ರವಾಸದ ವೇಳೆ ಅಕ್ಟೋಬರ್ ೧೯ರಿನಂದ ಅಕ್ಟೋಬರ್ ೨೭ರವರೆಗೆ ೯ ದಿನ ಇಲ್ಲಿ ತಂಗಿದ್ದರು.೧೮೯೩ರ ಚಿಕಾಗೋದ ವಿಶ್ವ ಸರ್ವ ಧರ್ಮ ಸಮ್ಮೇಳನಕ್ಕೆ ಹೋಗುವ ವಿಚಾರ ಸ್ವಾಮಿ ವಿವೇಕಾನಂದರಲ್ಲಿ ಮೊಳಕೆಯೊಡೆದಿದ್ದು ಇಲ್ಲಿಯೇ ಎಂದು ನಂಬಲಾಗಿದೆ.), ಅದರ ಮುಂದುಗಡೆ ಇರುವ ಪುರಾತನ ಕಮಲ ಬಸದಿ, ಕೋಟೆ ಕೆರೆ. ಪಕ್ಷಿ ವೀಕ್ಷಣೆ, ಟ್ರೆಕ್ಕಿಂಗ್ ಗೆ ಹೋಗೊರಿದ್ರೆ ಬೆಳಗಾವಿಯ ವ್ಯಾಕ್ಸಿನ್ ಡೀಪೊ ಪ್ರದೇಶ, ಸಮೀಪದ ಬುತ್ತರಾಮಟ್ಟಿಯ ಕಿರು ಮ್ರುಗಾಲಯದ ಹತ್ತಿರದ ಗುಡ್ಡಕ್ಕೆ ಹೋಗಬಹುದು. ಕಿತ್ತೂರು ಕೋಟೆ, ನವಿಲು ತೀರ್ಥ, ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ, ನಮ್ಮ 'ಹಿಡ್ಕಲ್ ಜಲಾಶಯ', ದೂದಸಾಗರ ಜಲಪಾತ, ವಜ್ರ ಜಲಪಾತ, ಆಸೋಗಾ ಜಲಪಾತ ಬೆಳಗಾವಿಯ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಸ್ಥಳಗಳು. ಸಮೀಪದ ಮಹಾರಾಷ್ಟ್ರದ ಅಂಬೋಲಿ ಘಾಟಿಗೂ ಭೇಟಿ
ನೀಡಬಹುದು. ಗೋವಾ ಸಹ ಬೆಳಗಾವಿಗೆ ನೂರೈವತ್ತು ಕಿ.ಮೀ ದೂರದಲ್ಲಿದೆ.
ಬೆಳಗಾವಿಯ ರಾಮಕೃಷ್ಣ ಮಿಶನ್ ಆಶ್ರಮ 

ಸ್ವಾಮೀ ವಿವೇಕಾನಂದರು ತಂಗಿದ್ದ ಮನೆ(ಈಗ ನವೀಕರಿಸಲಾಗಿದೆ)  


ನಮ್ಮ ಹಿಡಕಲ್ ಜಲಾಶಯ 

ಗೋಕಾಕ್ ಜಲಪಾತ 

ಗೊಡಚಿನಮಲ್ಕಿ ಜಲಪಾತ 

ಎಡವಿದ ಸರ್ಕಾರ:
ಸಮ್ಮೇಳನದ ದಿನಾಂಕವನ್ನು ಸ್ವಲ್ಪ ಮುಂಚೆಯೇ ನಿರ್ಧರಿಸಿದ್ದರೆ ಇನ್ನೂ ಹೆಚ್ಚಿನ ಕೆಲಸಗಳು ಬೆಳಗಾವಿಯಲ್ಲಿ ನಡೆಯುತ್ತಿದ್ದವೇನೋ. ಬೆಳಗಾವಿ ನಗರದ ಮೂಲಭೂತ ಸೌಕರ್ಯಗಳಿಗಾಗಿ ವಿಶೇಷಾನುದಾನ ಅಂತ ೧೦೦ಕೋಟಿಗಳನ್ನು ಯಡಿಯೂರಪ್ಪನವರು ಬಿಡುಗಡೆ ಮಾಡಿದ್ರು. ವಿಶ್ವ ಕನ್ನಡ ಸಮ್ಮೇಳನಕ್ಕೆ ಅಂತ ೩೦ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ಇನ್ನು ಮಹಾನಗರ ಪಾಲಿಕೆ, ನಗರಾಭಿವ್ರುದ್ಧಿ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ ಇವೆಲ್ಲ ಕೂಡಿ ಕೆಲಸ ಮಾಡಿದ್ದರೆ ಬೆಳಗಾವಿಯಲ್ಲಿ ಮೆರವಣಿಗೆ ಹೋಗೋ ದಾರಿಯನ್ನಾದರೂ ಕಾಂಕ್ರೀಟ್ ರಸ್ತೆಯಾಗಿ ಮಾಡಬಹುದಿತ್ತು. ಇನ್ನು ಗೋಡೆಗಳಿಗೆ ಕಲಾವಿದರಿಂದ ಚಿತ್ರ ಬರೆಸಿದಂತೆ 'ಪ್ಲಾಸ್ಟಿಕ್ ಬ್ಯಾನರ್'ಗಳಿಗೆ ಬದಲಾಗಿ ಅವನ್ನೂ ಕಲಾವಿದರಿಂದ ಬರೆಸಿದ್ದರೆ ಪರಿಸರ ಸ್ನೇಹಿ ಕೆಲಸವೂ ಆಗುತ್ತಿತ್ತು, ಕಲಾವಿದರಿಗೆ ಸಹಾಯ ಮಾಡಿದ ಹಾಗೂ ಆಗುತ್ತಿತ್ತು. ಇನ್ನು ಸಮ್ಮೇಳನದ ಪ್ರಯುಕ್ತ ಹೊಸ ವೆಬ್ಸೈಟು ಆರಂಭಿಸಬೇಕಿತ್ತು. ಇರುವ ಬೆಳಗಾವಿಯ ವೆಬ್ಸೈಟಲ್ಲೆ ಸಮ್ಮೇಳದ ವೆಬ್ಸೈಟ್ ಅಳವಡಿಸಲಾಗಿದೆ. ಅದೂ ಹೇಳಿಕೊಳ್ಳುವ ಗುಣಮಟ್ಟದ್ದಾಗಿಲ್ಲ. ಅದನ್ನೂ ಜಾಹೀರಾತುಗಳಲ್ಲಿ ನೀಡದೇ ಇದ್ದಿದ್ದರಿಂದ ಬಹಳಷ್ಟು ಜನರಿಗೆ ವೆಬ್ಸೈಟ್ ಇರುವುದು ಗೊತ್ತಾಗಿಲ್ಲ. ಸಮ್ಮೇಳನಗಳನ್ನು ನಡೆಸುವ ಬಗ್ಗೆ ನಮ್ಮ ದೇಶದ ಉಳಿದ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಗುಜರಾತಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ!

ಬೇಜಾರು:
     ಮರೆತಿಲ್ಲದಿದ್ದರೂ ವಿಶ್ವ ಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಪದೇ ಪದೇ ನೆನಪಾಗುತ್ತಿರುವುದು ಸಿ.ಅಶ್ವತ್ಥ್ ಅವರು! ಅವರಿದ್ದಿದ್ದರೆ ಸಮ್ಮೇಳನದ ಹೊಳಪೇ ಬೇರೆ ಇರುತ್ತಿತ್ತು. ಬಹುಶಃ ಲೋಕಾಯುಕ್ತರಾದ ಸಂತೋಷ ಹೆಗ್ಡೆಯವರು ಆಗಮಿಸುತ್ತಿಲ್ಲ!
ಸಿ.ಅಶ್ವತ್ಥ್ ಅವ್ರಿರ್ಬೇಕಿತ್ತು! 


ಸರ್ಕಾರಕ್ಕೆ ಅಭಿನಂದನೆ :
     ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಮೊದಲು ಪ್ರಸ್ತಾಪ ಆದದ್ದು ಕುಮಾರ ಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರವಿದ್ದಾಗ. ಆಗಿಂದ ಸಮ್ಮೇಳನದ ದಿನವನ್ನು ಮೂಂದೂಡುತ್ತಿರುವುದರಿಂದ ಬೆಳಗವಿಗೆ ಆದ ಉಪಯೋಗ ಬಹಳಷ್ಟು! ಈ ಮೊದಲು ಬೆಳಗಾವಿಯಲ್ಲಿ ಸಮ್ಮೇಳನದ ದಿನಾಂಕ ನಿರ್ಧಾರವಾಗುತ್ತಿದ್ದಂತೆ ರಸ್ತೆಗಳಲ್ಲಿ 'ಡಿವೈಡರ್ಗ'ಳನ್ನು ಮಾಡಿ ಮಧ್ಯೆ ಗಿಡ ಬೆಳೆಸಲು ಶುರು ಮಾಡಿದ್ರು. ಅವುಗಳ ಮಧ್ಯೆ ಇದ್ದ ಏರ್ಟೆಲ್ ಜಾಹೀರಾತುಗಳು ಇಂಗ್ಲೀಷಿನಲ್ಲಿದ್ದವು. ಸಮ್ಮೇಳನದ ಕೆಲಸ ಶುರುವಾದ ತಕ್ಷಣ ಅವನ್ನು ತೆಗೆದು ಮೇಲೆ ಕನ್ನಡದಲ್ಲಿ ಬರೆದು ಕೆಳಗೆ ಸಣ್ಣ ಅಕ್ಷರಗಳಲ್ಲಿ ಇಂಗ್ಲೀಷಿನಲ್ಲಿ ಬರೆಸಿ ಹಾಕಿಸಿದ್ದರು! ಇನ್ನು ಸಮ್ಮೇಳನ ಮುಂದೂಡಿದ್ದರಿಂದ ಬೆಳಗಾವಿ ರಸ್ತೆಗಳು ಮತ್ತೆ ಮತ್ತೆ ಡಾಂಬರೀಕರಣಗೊಂಡವು! ಹೊಸ ಫುಟ್ ಪಾತುಗಳು ನಿರ್ಮಾಣಗೊಂಡವು. ಸಮ್ಮೇಳನದ ನೆಪದಲ್ಲಿ ನಡೆಯುತ್ತಿರುವ ಕೆಲಸಗಳಿಂದ ಸಾವಿರಾರು ಜನರಿಗೆ ಕೆಲಸ ದೊರೆತಿದ್ದು ಸಮ್ಮೇಳನದ ಯಶಸ್ಸೆಂದೇ ನನ್ನ ಅನಿಸಿಕೆ. ಹೀಗಾಗಿ ಸರ್ಕಾರಕ್ಕೆ ಅಭಿನಂದನೆ ಹೇಳಲೇಬೇಕು.

ಮುಂದಿನ ಸಮ್ಮೇಳನದವರೆಗೂ ಕಾಯದಿರಿ!
     ಕರ್ನಾಟಕ ಏಕೀಕರಣದ ನಂತರ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನವಿದು. ಈ ಮೊದಲು ೧೯೮೫ರಲ್ಲಿ ಮೈಸೂರಿನಲ್ಲಿ ಮೊದಲ ’ಶ್ವ ಕನ್ನಡ ಸಮ್ಮೇಳನ’ ಡೆದಿತ್ತು. ಅದನ್ನು ಉದ್ಘಾಟಿಸಿದ್ದು ನಮ್ಮ ಶಿವರಾಮ ಕಾರಂತರು!(ಆಗ ಬರಗಾಲ ಇದ್ದಿದ್ದರಿಂದ ಕೆಲವರು ಕಾರಂತರಿಗೆ ಪತ್ರ ಬರೆದು ಸಮ್ಮೇಳನಕ್ಕೆ ಬರಬೇಡಿ ಎಂದು ಪತ್ರಬರೆದಿದ್ದರಂತೆ. ಸಮ್ಮೇಳನದಲ್ಲಿ ಪಾಲ್ಗೊಂಡು ಅದನ್ನು ಪ್ರಸ್ತಾಪಿಸಿ "ಬರ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರೆಯೇ?!" ಅಂತ ಐತಿಹಾಸಿಕ ಹೇಳಿಕೆ ಕೊಟ್ಟಿದ್ದರಂತೆ!) ೨೫ ವರ್ಷಗಳ ನಂತರ  ಬೆಳಗಾವಿಯಲ್ಲಿ  ಎರಡನೆಯ ವಿಶ್ವ ಕನ್ನಡ ಸಮ್ಮೇಳನ  ನಡೆಯುತ್ತಿದೆ. ಮುಂದೆ ಯಾವಾಗ ನಡೆಯುತ್ತೋ ಯಾರಿಗ್ಗೊತ್ತು?! ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡೋತ್ಸವಕ್ಕೆ ತಪ್ಪದೇ ಬನ್ನಿ!

     ಸಮಸ್ತ ಕನ್ನಡಿಗರಿಗೆ ಬೆಳಗಾವಿಗೆ ಹೃತ್ಪೂರ್ವಕ ಸ್ವಾಗತ!!


                                                                       ಇಂತಿ ಎಲ್ಲರವ,
                                                                 ಕಾಡಸಿದ್ಧೇಶ್ವರ ಕರಗುಪ್ಪಿ
                                                                       ಹಿಡಕಲ್ ಡ್ಯಾಂ