Pages

Monday, June 6, 2011

ಭಾರತದ ರಾಜಕಾರಣಿಗಳ ಸಮಸ್ಯೆ

     ಬಹಳ ಹಿಂದೆ ಕೇಳಿದ ಕಥೆ.
     (ಈ ಕಥೆ ನಡೆಯುವ ಕಾಲಘಟ್ಟದಲ್ಲಿ ಸ್ಯಾಮ್ ಪಿಟ್ರೋಡಾ ಅವರಿಂದ ಭಾರತದಲ್ಲಿ ಇನ್ನೂ ಮೊಬೈಲ್ ಕ್ರಾಂತಿ ನಡೆದಿರಲಿಲ್ಲ ಎಂದು ಭಾವಿಸಬೇಕು!)

     ಒಂದು ಸಲ ಭಾರತದ ರಾಜಕಾರಣಿಯೊಬ್ಬರು ಒಂದು ಅಪಘಾತದಲ್ಲಿ ಕಾರಿನಿಂದ ಪಾರಾಗುತ್ತಾರೆ(ಬಹಳಷ್ಟು ಹಗರಣಗಳಿಂದ ಪಾರಾದಂತೆ!). ಅಲೆದಾಡುತ್ತ ಒಂದು ಗದ್ದೆಯಲ್ಲಿ ಒಬ್ಬ ರೈತನನ್ನು ಕಂಡು, 'ನಾನು ರಾಜಕಾರಣಿ, ನನಗೆ ಊಟ ಕೊಡು' ಎನ್ನುತ್ತಾನೆ. ಆದರೆ ರೈತ ಒಂದು ಶರತ್ತಿನ ಮೇಲೆ ಊಟ ನೀಡುತ್ತೇನೆನ್ನುತ್ತಾನೆ. ನನ್ನ ಗದ್ದೆಯ ಕೆಲಸ ಮಾಡಿದರೆ ಮಾತ್ರ ನಿನಗೆ ಊಟ ಎನ್ನುತ್ತಾನೆ.

    ರಾಜಕಾರಣಿ: ಏನು ಕೆಲಸ?
   
    ರೈತ: ಅಲ್ಲಿ ನೋಡು, ಗದ್ದೆಯಲ್ಲಿ ಅಲ್ಲಲ್ಲಿ ಸಗಣಿ ಗೊಬ್ಬರದ ಗುಡ್ಡೆ ಬಿದ್ದಿದೆ, ಅದನ್ನು ಎಲ್ಲ ಕಡೆ ಸಮಾನವಾಗಿ ಹರಡು.
     
    ರಾಜಕಾರಣಿ, ರೈತ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ. ರೈತನಿಗೆ ರಾಜಕಾರಣಿಯ ಕೆಲಸ ನೋಡಿ ಖುಷಿ, ಆಶ್ಚರ್ಯ ಎರಡೂ ಒಟ್ಟಿಗೆ ಆಗುತ್ತವೆ. ರೈತ ರಾಜಕಾರಣಿಗೆ ಊಟ ಕೊಡುತ್ತಾನೆ.
     
     ಮರುದಿನ ಬೆಳಿಗ್ಗೆ ರೈತ ರಾಜಕಾರಣಿಗೆ, 'ಇವತ್ತು ನಿನಗೆ ಬಹಳ ಸರಳವಾದ ಕೆಲಸ' ಎನ್ನುತ್ತಾನೆ. ರಾಜಕಾರಣಿ 'ಏನು?' ಎಂದು ಕೇಳಿದಾಗ, ರೈತ, 'ಅಲ್ಲಿ ನೋಡು, ಆಲೂಗಡ್ಡೆಗಳ ರಾಶಿ ಬಿದ್ದಿದೆ, ಅದರಲ್ಲಿ ದೊಡ್ಡ ಆಲೂಗಡ್ಡೆಗಳನ್ನು ಆ ಮೂಲೆಯ ಹತ್ತಿರ ಇಡಬೇಕು, ಸಣ್ಣ ಆಲೂಗಡ್ಡೆಗಳನ್ನು ಈ ಮೂಲೆಯ ಬಳಿ ಇಡಬೇಕು' ಎಂದು ಹೇಳಿ ಹೊರಗಡೆ ಹೋಗುತ್ತಾನೆ.
     
     ಸ್ವಲ್ಪ ಸಮಯದ ನಂತರ ರೈತ ಬಂದು ನೋಡಿದಾಗ ಆಲೂಗಡ್ಡೆಗಳು ಇದ್ದ ಜಾಗದಲ್ಲೇ ಇರುತ್ತವೆ. ರಾಜಕಾರಣಿ ಒಂದು ಮೂಲೆಯಲ್ಲಿ ಅಳುತ್ತಾ ಕುಳಿತಿರುತ್ತಾನೆ.
     
     ರೈತ: ಏನಾಯ್ತು? ಯಾಕೆ ಅಳುತ್ತಿದ್ದೀಯ?
     
     ರಾಜಕಾರಣಿ: ನೀನು ಹೇಳಿದ ಕೆಲಸ ನನಗೆ ಮಾಡಲಾಗಲಿಲ್ಲ(ಅಳು), ಕೆಲಸ ಮಾಡದಿದ್ದರೆ ನೀನು ಊಟ ಕೊಡುವುದಿಲ್ಲ(ಜೋರಾಗಿ ಅಳು)
     
     ರೈತ: ಅಲ್ಲಯ್ಯ, ನಿನ್ನೆ ಅಷ್ಟು ತ್ರಾಸದಾಯಕ ಸಗಣಿ ಗೊಬ್ಬರ ಹರಡುವ ಕೆಲಸವನ್ನು ಒಬ್ಬನೇ ಮಾಡಿದೆ ಇವತ್ತು ಇಷ್ಟು ಸರಳ ಕೆಲಸವನ್ನು ನಿನಗೆ ಮಾಡಲಾಗಲಿಲ್ಲವೆ?
     
     ರಾಜಕಾರಣಿ: ಅದು ನಿನಗೆ ಗೊತ್ತಾಗಲ್ಲ, ನಮ್ಮ ರಾಜಕಾರಣಿಗಳ ಸಮಸ್ಯೆ ನಮಗಷ್ಟೇ ಗೊತ್ತು.

     ರೈತ: ಏನು ನಿಮ್ಮ ಸಮಸ್ಯೆ?
     
     ರಾಜಕಾರಣಿ: ಅಂಥಾ ಹೊಲಸು ಹಿಡಿಸುವ ಕೆಲಸ ಯಾವುದಿದ್ದರೂ ಹೇಳು, ನಾವು ಮಾಡುತ್ತೇವೆ. ಆದರೆ ಈ ಥರಾ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾತ್ರ ನಮ್ಮಿಂದ ಆಗದ ಮಾತು!!

    ಇದು ನಮ್ಮ ಭಾರತದ ಬಹುತೇಕ ರಾಜಕಾರಣಿಗಳ ಸಮಸ್ಯೆ.

                                                                         ಇಂತಿ ಎಲ್ಲರವ, 
                                                                 ಕಾಡಸಿದ್ಧೇಶ್ವರ ಕರಗುಪ್ಪಿ 
                                                                        ಹಿಡಕಲ್ ಡ್ಯಾಮ್
      

Monday, April 18, 2011

'ಕನ್ನಡ ಕಲರವ' ದಲ್ಲಿ ಎಸ್.ಎಲ್.ಭೈರಪ್ಪನವರ ಕಳಕಳಿ

     ಈ ಬರಹ ಸ್ವಲ್ಪ ದೊಡ್ದದೆನಿಸಿದರೂ ಇಷ್ಟವಾಗಬಹುದು. ಇದನ್ನು ಓದುವ ಮೊದಲು ಇಲ್ಲೊಮ್ಮೆ ನೋಡಿದರೆ ಕ್ಷೇಮ http://goo.gl/nEW4m

     [ಕನ್ನಡಿಗರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಡಾ.ಎಸ್.ಎಲ್.ಭೈರಪ್ಪ ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು.ವಿಸ್ತಾರವಾದ ಜೀವನಾನುಭವ ಹೊಂದಿರುವ ಅವರು ಪ್ರಖರ ವೈಚಾರಿಕತೆ, ತಲಸ್ಪರ್ಶಿ ಅಧ್ಯಯನ, ತಾರ್ಕಿಕ ಚಿಂತನೆ ಹಾಗು ಖಚಿತ ಅಭಿಪ್ರಾಯ ನಿರೂಪಣೆ - ಇವುಗಳಿಂದಾಗಿ ನಾಡಿನಲ್ಲೇ ಹೆಸರಾದವರು. ಅಗಾಧ ಓದು ಹಾಗು ಜಾಗತಿಕ ಪ್ರವಾಸಗಳಿಂದ ತಮ್ಮ ಜ್ಞ್ಯಾನದ ಪರಿಧಿಯನ್ನು, ಅನುಭವದ ಆಳವನ್ನು ಹೆಚ್ಚಿಸಿಕೊಂಡು ಪರಿಪಕ್ವವಾಗಿರುವ ಭೈರಪ್ಪನವರೊಂದಿಗೆ ಮೈಸೂರಿನ ಅವರ ನಿವಾಸದಲ್ಲಿ 'ಕನ್ನಡ ಕಲರವ'ದ ಸಂಪಾದಕೀಯ ತಂಡ ಈಚೆಗೆ ವಿಶೇಷ ಸಂವಾದ ನಡೆಸಿತು. ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಚ್.ಎಸ್.ನಾರಾಯಣಮೂರ್ತಿ, 'ಕನ್ನಡ ಕಲರವ'ದ ಪ್ರಧಾನ ಸಂಪಾದಕ ವಿ.ಎನ್.ಸುಬ್ಬರಾವ್, ಸಂಯುಕ್ತ ಕರ್ನಾಟಕದ ಸಂಪಾದಕ ಹುಣಸವಾಡಿ ರಾಜನ್ ಹಾಗು ಸಹ ಸಂಪಾದಕ ಜಿ.ಅನಿಲ್ ಕುಮಾರ್ ಸುಮಾರು ಎರಡು ಗಂಟೆಗಳ ಕಾಲ ಭೈರಪ್ಪನವರೊಂದಿಗೆ ಸಂವಾದ ನಡೆಸಿದರು.ಈ ವಿಶೇಷ ಸಂವಾದದ ಆಯ್ದ ಭಾಗಗಳು ಇಲ್ಲಿವೆ. ೨೦೦೧ರ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ, ವೈಭವಯುತ ಹಾಗು ಶಕ್ತಿಯುತ ಕರ್ನಾಟಕವನ್ನು (ಹಾಗು ಭಾರತವನ್ನು) ನಿರ್ಮಿಸುವ ಕುರಿತಾದ ತಮ್ಮ ಚಿಂತನೆಗಳನ್ನು ಭೈರಪ್ಪನವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

     'ವಿಶ್ವ ಕನ್ನಡ ಸಮ್ಮೇಳನ' ಅನ್ನುವ ಬದಲು "ವಿಶ್ವ ಕರ್ನಾಟಕ ಸಮ್ಮೇಳನ" ಅಂತ ಕರೆಯೋದು ಹೆಚ್ಚು ಸೂಕ್ತ ಎಂದು ನನಗೆ ಅನಿಸುತ್ತದೆ.
     ಕನ್ನಡ ಭಾಷೆಯ ಉಳಿವು-ಅಳಿವಿನ ಕುರಿತಂತೆ ನಾವು ಬೇಕಾದಷ್ಟು ಚರ್ಚೆ ಮಾಡಿದ್ದೀವಿ. ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಹೇಳಿದ್ದಾರೆ. ಪತ್ರಿಕೆಗಳಲ್ಲೂ ಈ ಬಗ್ಗೆ ಬಹಳಷ್ಟು ಲೇಖನ ಬರೆದಿದ್ದಾರೆ. ಈ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಮುಖ್ಯವಾಗಿ ಆಗಬೇಕಾದದ್ದು ಕರ್ನಾಟಕ ಆರ್ಥಿಕವಾಗಿ, ರಾಜಕೀಯವಾಗಿ ಸಬಲವಾಗಬೇಕು. ಎಲ್ಲಿಯವರೆಗೆ ನಾವು ಆರ್ಥಿಕವಾಗಿ ಸದೃಡರಾಗಿರುವುದಿಲ್ಲವೋ  ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಸದೃಡರಾಗಲು ಸಾಧ್ಯವಿಲ್ಲ.
     ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಥವಾ ಸ್ವಾತಂತ್ರ್ಯ ಬಂದ ಮೇಲೂ ನಾವು ರಾಜಕೀಯವಾಗಿ ಸಬಲರಾಗಿರಲಿಲ್ಲ. ಉತ್ಸಾಹ ಮೂಡಿಸಲು 'ನಾವು ಗಂಡುಗಲಿಗಳು' ಹಾಗೆ ಹೀಗೆ ಅಂತ ಹೇಳಬಹುದು. ಇತ್ತೀಚಿನ ಇತಿಹಾಸ ತೆಗೆದುಕೊಂಡರೆ ಮಹಾರಾಷ್ಟ್ರದಲ್ಲಿ ಮರಾಠರು ಹಿಂದೆ ಎಷ್ಟು ಪ್ರಬಲರಾಗಿದ್ದರೋ ಅದರ ಪ್ರಾಬಲ್ಯ ಈಗಲೂ ಹಾಗೇ ಇದೆ. ಮರಾಠರ ಮನೋಭೂಮಿಕೆಯಲ್ಲಿ ಅದರ ಪ್ರಾಬಲ್ಯ ಇನ್ನೂ ಇದೆ. ಇನ್ನು ಉತ್ತರ ಕರ್ನಾಟಕವನ್ನು ತೆಗೆದುಕೊಂಡರೆ ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಅಲ್ಲಿದ್ದ ನಮ್ಮ ಎಲ್ಲ ನಾಯಕರೂ ಮಹರಾಷ್ಟ್ರವನ್ನೇ ನೋಡುತ್ತಿದ್ದರು. ತಿಲಕ್ ರನ್ನೇ ನೋಡುತ್ತಿದ್ದರು. ನಂತರ ಮಹಾತ್ಮಾ ಗಾಂಧೀಯನ್ನು ನೋಡಲು ಪ್ರಾರಂಭಿಸಿದರು. ಹಳೇಮೈಸೂರು ಪ್ರಾಂತ್ಯದಲ್ಲಂತೂ ಮಹಾರಾಜರ ಸರ್ಕಾರವಾಗಿತ್ತು. ಇವರದೇ ಬೇರೆ culture ಬಂತು. ಮತ್ತೆ ಆಮೇಲೆ ಕಾಂಗ್ರೆಸ್ ಇಲ್ಲಿಗೂ ಬಂತು. 
  ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ನಾವು ಕನ್ನಡಿಗರು ರಾಜಕೀಯವಾಗಿ ಪ್ರಬಲರಾಗಿರಲಿಲ್ಲ. ತಮಿಳರು ಯಾವತ್ತೂ ಪ್ರಬಲರಾಗಿದ್ದವರೇ ಬ್ರಿಟಿಷ್ ರ  ಕಾಲದಲ್ಲೂ ಅವರು ಪ್ರಬಲರೇ. ಕೇರಳದವರು central governmentನಲ್ಲಿ ತಮ್ಮ ಮಾತು ಯಾವ ರೀತಿ ನಡೆಸಿಕೊಳ್ಳಬೇಕು ಅನ್ನೋದನ್ನು ಮೊದಲಿನಿಂದಲೂ ಮಾಡ್ಕೊಂಡು ಬಂದ್ರು, ಈಗಲೂ ಅವರು ಅದನ್ನೆಲ್ಲ ಮಾಡುತ್ತ ಬಂದಿದ್ದಾರೆ. ನಾವು ಕರ್ನಾಟಕದವರು ಯಾಕೆ ಇದನ್ನು ಮಾಡುವುದಿಲ್ಲ? ನಮ್ಮ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನಾವು ಸುಧಾರಿಸುವುದು ಸಾಧ್ಯವಿಲ್ಲ.
   ಈ ಕುರಿತು ಯೋಚಿಸುವಾಗ ನಾವು ವೈಚಾರಿಕ ನೆಲೆಯಲ್ಲಿ abstract ಶಬ್ದಗಳನ್ನು ಬಳಸಿ ಉಪಯೋಗವಿಲ್ಲ. ಅವೆಲ್ಲಾ misleading ಶಬ್ದಗಳು. ಯಾವುದೇ ಒಂದು ಶಬ್ದ ನಾವು ಬಳಸಿಬಿಟ್ಟರೆ ಆ ಶಬ್ದದೊಳಗೆ ನಮ್ಮ ಆಲೋಚನೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅದಲ್ಲ ಮುಖ್ಯ. centralನಲ್ಲಿ ಕಾಂಗ್ರೆಸ್ ಆಳ್ತಿದ್ದಾಗ ಇಲ್ಲೂ ಕಾಂಗ್ರೆಸ್ ಇತ್ತು.ಅದು ಹ್ಯಾಗಿತ್ತು ಅಂದರೆ ವಿಧೇಯವಾಗಿತ್ತು. ಕರ್ನಾಟಕದ ಉದ್ಧಾರದ ಪ್ರಶ್ನೆ ಬಂದಾಗ, ಕರ್ನಾಟಕಕ್ಕೆ ಉಪಯೋಗವಾಗೋ ಪ್ರಶ್ನೆ ಬಂದಾಗ 'ಗಲಾಟೆ ಮಾಡಬೇಡ' ಅಂತ ಅವರು ಗದರಿಸಿಬಿಟ್ಟರೆ ಇವರು ಸುಮ್ಮನಾಗಿಬಿಡುತ್ತಿದ್ದರು. ಆಮೇಲೆ ಅಲ್ಲಿ ಬೇರೆ ಪಕ್ಷವಿದ್ದು ಇಲ್ಲಿ ಇವರಿದ್ದಾಗ ಉಲ್ಟಾ ಆಗಲು ಪ್ರಾರಂಭವಾಯಿತು.
   ಆಂಧ್ರ ಪ್ರದೇಶದಲ್ಲಿ ಏನಾಯಿತು? ಕೇಂದ್ರದಲ್ಲಿ ಎನ್.ಡಿ.ಎ ಆಳ್ವಿಕೆಯಿದ್ದಾಗ ಚಂದ್ರಬಾಬು ನಾಯ್ಡು ಹೊರಗಿನಿಂದ ಬೆಂಬಲ ನೀಡ್ತಿದ್ದರು. ಆಂಧ್ರಕ್ಕೆ ಬೇಕಾದ ಸವಲತ್ತು ಪಡೆಯಲು ಅಧಿಕಾರಿಗಳನ್ನು ಕರೆದುಕೊಂಡು ಕೇಂದ್ರಕ್ಕೆ ಸ್ವತಃ ಹೋಗುತ್ತಿದ್ದರು. ಇಂತಿಷ್ಟು ಬೇಕು, ಇಷ್ಟಿಷ್ಟು ಬೇಕು ಎಂದು ಅವರು ಹೇಳಿದರೆ ಸಾಕು, ಅವರು ಮಂಜೂರು ಮಾಡ್ತಿದ್ದರು. ಅವರು ತಮ್ಮ ಸ್ವಂತಕ್ಕೆ ಏನು ಮಾಡಿಕೊಂಡ್ರೋ ಗೊತ್ತಿಲ್ಲ. ಆದರೆ ಆಂಧ್ರ ಪ್ರದೇಶಕ್ಕಂತೂ ಬೇಕಾದಷ್ಟು ಸವಲತ್ತನ್ನು ಅವರು ಪಡೆದರು. ತಮಿಳುನಾಡಿನವರೂ ಇದೇ ಮಾಡ್ತಿದ್ದಾರೆ. ಮೊನ್ನೆ ನೋಡಿ, ಸುನಾಮಿ ಆಯಿತು. ಆಗ ಕೇಂದ್ರದಲ್ಲಿ ಚಿದಂಬರಂ ಅವರು ಅರ್ಥಸಚಿವರಾಗಿದ್ದರು. ಆಗ ಅವರು ಒಂದೇ ಸಲಕ್ಕೆ ಹತ್ತು ಸಾವಿರ ಕೋಟಿ ಹಣ ಮಂಜೂರು ಮಾಡಿಬಿಟ್ಟರು. ಮೀಡಿಯಾದವರು ಇದನ್ನು ಹೈಲೈಟ್ ಮಾಡಿದರೂ ಮತ್ತೆ ಮತ್ತೆ ಮಂಜೂರು ಆಯಿತು. ಅದೇ ಕರ್ನಾಟಕದಲ್ಲಿ ಇಂತಹದು ಏನೇ ಆದರೂ ಮೂರು ಕಾಸೂ ಕೊಡ್ತಿರಲಿಲ್ಲ. ಚೌಕಾಸಿ ಮಾಡಿದರೆ ಒಂದು ನೂರು ಕೋಟಿ, ಐನೂರು ಕೋಟಿ ಕೊಡ್ತಾ ಇದ್ದರು. ಒಟ್ಟಿನಲ್ಲಿ ರಾಜಕಾರಣದೊಳಗೆ ತಮ್ಮ ರಾಜ್ಯಕ್ಕೆ ಏನು ಉಪಯೋಗವೋ ಅದನ್ನು ನೋಡಿ ಅವರು ರಾಜಕಾರಣ ಮಾಡಿಸ್ತಾರೆ. ಆದರೆ ಕರ್ನಾಟಕದಲ್ಲಿ ಯಾವತ್ತೂ ಇಂತಹದು ಆಗಿಲ್ಲ. ನಾವು ಆ ಪಕ್ಷ ನೀವು ಈ ಪಕ್ಷ ಅಂತ ಬರೀ ಜಗಳ ಆಡಿಕೊಂಡೇ ನಮ್ಮವರು ರಾಜಕೀಯ ನಡೆಸ್ತಾರೆ.
     ಕರ್ನಾಟಕದ ಏಕೀಕರಣವಾದಾಗ ನಾವೆಲ್ಲ ಏಕೀಕರಣಕ್ಕೆ ಹೋರಾಡಿದೆವು, ಹೊಡೆದಾಡಿದೆವು ಅಂತ ಕರ್ನಾಟಕದವರು ಹೇಳ್ತಾರೆ. ಆದರೆ ಏಕೀಕರಣ ತಂದು ಕೊಟ್ಟವರು ಆಂಧ್ರದ ಪೊಟ್ಟಿ ಶ್ರೀರಾಮುಲು. ಅವರು ಉಪವಾಸ ಮಾಡಿ ಆಂಧ್ರದವರು ದಂಗೆ ಏಳ್ತಾರೆ ಅನ್ನೋ ಸಂದರ್ಭ ಬಂದಾಗ ಆ ರಾಜ್ಯದ ಬೇಡಿಕೆಯನ್ನು  ಒಪ್ಪಿಕೊಂಡರು ಕೇಂದ್ರದವರು.ನಂತರ ಕರ್ನಾಟಕಕ್ಕೂ ಅದನ್ನು ಕೊಡಬೇಕಾಯಿತು.ಆಗಲೂ ಕೂಡಾ ಯಾವ ಯಾವ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕಾಗಿತ್ತೋ ಅದನ್ನು ಸೇರಿಸೋ ಶಕ್ತಿ ನಮ್ಮ ನಾಯಕರಿಗೆ ಇರಲಿಲ್ಲ. ಇದನ್ನು ನಾವು ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು. ಇದೇ ವಾಸ್ತವಾಂಶ. ಅದಿಲ್ಲದಿದ್ದರೆ ಯಾಕೆ ಇಷ್ಟೊಂದು ಪ್ರದೇಶಗಳು ಕರ್ನಾಟಕದ ಹೊರಗಡೆ ಹೋಗಬೇಕಾಗಿತ್ತು? ನಾವು ಎಷ್ಟೊಂದು ಕಳೆದುಕೊಂಡಿದ್ದೀವಿ ನೋಡಿ. ರಾಜಕೀಯವಾಗಿ ಮೊದಲಿನಿಂದಲೂ ನಾವು ದುರ್ಬಲರೇ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಅದರರ್ಥ ನಮ್ಮನ್ನು ನಾವು ಬೈದುಕೊಳ್ಳುವುದಂತಲ್ಲ. ನಮಗೆ ಏನು ಬೇಕು ಅನ್ನೋದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ  ಜನಕ್ಕೆ, ರಾಜ್ಯಕ್ಕೆ ಏನು ಬೇಕು ಎಂಬುದನ್ನು ನಾವಿನ್ನೂ ಅರ್ಥ ಮಾಡಿಕೊಳ್ತಾನೇ ಇಲ್ಲ.
     ಈಗ ಮೈಸೂರು-ಬೆಂಗಳೂರು ರೇಲ್ವೇಗೆ ಎರಡು ಲೈನ್ ಮಾಡ್ಬೇಕು ಅಂತಿದೆ. ಆದರೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಆಯುಧ ಇಡಲು ಮಾಡಿದ್ದ ಕಟ್ಟಡ ಇದೆ. ಡಬಲ್ ಲೈನ್ ಹಾಕಬೇಕಾದರೆ ಅದನ್ನು ಒಡೀಬೇಕಾಗುತ್ತದೆ. ಏಕೆಂದರೆ ಬೇರೆ ಜಾಗ ಇಲ್ಲ. ಶ್ರೀರಂಗಪಟ್ಟಣ ಒಂದು ಸಣ್ಣ ದ್ವೀಪ ಅಷ್ಟೇ. ಹೀಗಾಗಿ ಅದನ್ನು ಒಡೀಲೇಬೇಕು. ಆದರೆ 'ಅದನ್ನು ಒಡೀಬಾರದು ಅಂತ ಹೋರಾಡಿ' ಎಂದು ನಮ್ಮ ರಾಜಕಾರಣಿಗಳೇ ಮುಸ್ಲಿಮರಿಗೆ ಹೇಳಿಕೊಟ್ಟಿದ್ದಾರೆ. 'ಅದು ಪವಿತ್ರ ಸ್ಥಳ,ಒಡೆಯಲು ಒಪ್ಪಿಗೆ ಕೊಡಬೇಡಿ' ಅಂತ ನಮ್ಮ ರಾಜಕಾರಣಿಗಳೇ ಹೇಳ್ತಾರೆ. ಅದಕ್ಕೇ ಅವರು ಕೋಡೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಆಳೋ ಸರ್ಕಾರಕ್ಕೆ ಎಲ್ಲಿ ತಮ್ಮ ವೋಟು ಹೋಗುತ್ತೋ ಅಂತ ಭಯ.ಇದನ್ನು ಮೊದಲು ಸರಿ ಮಾಡದೇ ಇದ್ದರೆ ಡಬಲ್ ಲೈನ್ ಬರೋದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಸ್ವಲ್ಪ ಜಾಗಾ ಒತ್ತುವರಿ  ಮಾಡಲೇಬೇಕಾಗುತ್ತದೆ.
     ಯಾವ ರೀತಿಯ ರಾಜಕಾರಣ ನಮ್ಮಲ್ಲಿ ನಡೀತಿದೆ ನೋಡಿ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಮುಂದುವರಿಯಬೇಕು ಅನ್ನೋದಾಗಲಿ, ಸಣ್ಣ ಬುದ್ಧಿಯ ರಾಜಕಾರಣ ನಾವು ಮಾಡಬಾರದು ಅನ್ನೋದಾಗಲಿ ಇಲ್ಲಿನ ಬಹುತೇಕ ರಾಜಕಾರಣಿಗಳಿಗೆ ಇಲ್ಲವೇ ಇಲ್ಲ ಅಂತ ನನಗನಿಸುತ್ತದೆ.
   ಕೈಗಾರಿಕೆ ಮುಂದುವರೀದೆ ಇದ್ರೆ ಯಾವ ರಾಜ್ಯವೂ ಬೆಳೆಯಲು ಸಾಧ್ಯವೇ ಇಲ್ಲ. ತಮಿಳು ನಾಡಿನಲ್ಲಿ ಸಾಕಷ್ಟು ಉದ್ಯಮಿಗಳಿದ್ದಾರೆ. ಅದಲ್ಲದೆ ಹೊರಗಿನಿಂದಲೂ ಉದ್ಯಮಿಗಳು ಅಲ್ಲಿಗೆ ಬರ್ತಾರೆ. ಮೊನ್ನೆ ನನಗೆ ಒಬ್ಬರು ತಮಿಳಿನವರು ಸಿಕ್ಕಿದ್ದರು. ಅವರು ಹೇಳ್ತಿದ್ದರು, 'ಕರ್ನಾಟಕಕ್ಕೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಬಿಸಿಲು, ಸೆಕೆ. ಬೆವರು ಯಾರಿಗೂ ತಡೆಯೋಕೆ ಆಗೊಲ್ಲ. ಆದರೂ ಉದ್ಯಮಿಗಳು ನಮ್ಮಲ್ಲಿಗೆ ಬರ್ತಾರೆ. ಏಕೆಂದರೆ ಅಷ್ಟೊಂದು ಮೂಲಭೂತ ಸೌಲಭ್ಯ ಅಲ್ಲಿ ಕೊಡಲಾಗಿದೆ. ಜಯಲಲಿತಾ ಕಾಲದಿಂದಲೂ ರೈಲು, ಬಸ್ ಬೇಕಾದಷ್ಟಿವೆ' ಎಂದು.
     ನಮ್ಮಲ್ಲಿ ಮೂಲಭೂತ ಸೌಕರ್ಯ ಇಲ್ಲವೇ ಇಲ್ಲ. ನಮ್ಮಲ್ಲಿ ಎಲೆಕ್ಟ್ರಿಸಿಟಿ ಅಷ್ಟಾಗಿ ಇಲ್ಲ. ಮೈಸೂರಿನಿಂದ ೨೫ಕಿ.ಮೀ. ದೂರದಲ್ಲಿ ಥರ್ಮಲ್ ಪವರ್ ಸ್ಟೇಷನ್ ಮಾಡ್ಬೇಕು ಅಂತಾ ಒಂದು ಪ್ರಸ್ತಾವನೆ ಇತ್ತು. ಆದರೆ ನಮ್ಮ ಪರಿಸರವಾದಿಗಳೇ 'ಅದನ್ನು ಮಾಡಿದರೆ ಪರಿಸರಕ್ಕೆ ಹಾನಿಯಾಗುತ್ತೆ, ಬೂದಿ ಬಿದ್ದುಬಿಡುತ್ತದೆ, ಮೈಸೂರಿಗೆ ಸೆಕೆ ಜಾಸ್ತಿ ಬರುತ್ತದೆ, ಶಾಖ ಹೆಚ್ಚಾಗುತ್ತದೆ' ಅಂದೆಲ್ಲ ಅಡ್ಡಗಾಲು ಹಾಕಿದರು. ಆದರೆ ಮೊನ್ನೆ ಅಂದರೆ ಕಳೆದ ವರ್ಷ ನಾನು ಅಹ್ಮದಾಬಾದ್ ಗೆ ಹೋಗಿದ್ದೆ. ಆರು ವರ್ಷ ಗುಜರಾತ್ ನಲ್ಲಿದ್ದೆ ನಾನು. ಈಗಲೂ ಆಗಾಗ್ಗೆ ಅಲ್ಲಿಗೆ ಹೋಗುತ್ತಿರುತ್ತೇನೆ. ಅಲ್ಲಿ ಎರಡು ಥರ್ಮಲ್ ಪ್ಲಾಂಟ್ ಗಳಿವೆ. ಅದೂ ನಗರದ ಒಳಭಾಗದಲ್ಲಿ, ಹೊರಗಲ್ಲ. ಒಂದು ಸಬರಮತಿ ಆಶ್ರಮದ ಹತ್ತಿರ, ಇನ್ನೊಂದು ಗಾಂಧಿ ನಗರದಲ್ಲಿ. ಅಂಥ ಬೇಸಿಗೆಯ ಬಿಸಿ ಇರೋ ನಗರದ ಮಧ್ಯದಲ್ಲಿ ಯಾಕೆ ಅವರು ಥರ್ಮಲ್ ಪವರ್ ಪ್ಲಾಂಟ್ ಹಾಕಿದ್ರು? ಆಧುನಿಕ ತಂತ್ರಜ್ನ್ಯಾನ ಅಲ್ಲಿ ಅಭಿವೃದ್ಧಿ ಆಗಿದೆ. ಟಾಟಾ ಕಂಪನಿಯವರು ನ್ಯಾನೋ ಕಾರನ್ನು ಬಂಗಾಲದಿಂದ ತೆಗೆದ ಮೇಲೆ ನಮ್ಮವರು 'ಧಾರವಾಡದಲ್ಲಿ ನಾವು ಜಾಗ ಕೊಡ್ತೀವಿ' ಅಂದ್ರು. ಜಾಗ ಎಲ್ಲಿದೆ? ಒತ್ತುವರಿ ಮಾಡಿಕೊಂಡು ನಂತರ ಕೊಡ್ತೇವೆ ಅಂದ್ರು. ಅದಕ್ಕೆ ವಿದ್ಯುತ್ ಶಕ್ತಿ ಎಲ್ಲಿಂದ ಕೊಡ್ತೀರಿ? ಯಾವಾಗ ಮೂಲಭೂತ ಸೌಲಭ್ಯ ಇಲ್ಲವೋ ಅಲ್ಲಿ ಅಭಿವೃದ್ಧಿಯ ಮಾತೇ ಇಲ್ಲ.
   ಅದೇ ಸಮಯದಲ್ಲಿ ಗುಜರಾತಿನ ನರೇಂದ್ರ ಮೋದಿ ಸಹ ನ್ಯಾನೋ ಕಂಪನಿಗೆ ಆಫರ್ ಕೊಟ್ರು. ಎರಡೂ ಕಡೆ ಪರೀಕ್ಷೆ ಮಾಡಿದ ಟಾಟಾದವರು ಗುಜರಾತ್ ಅನ್ನೇ ಆರಿಸಿದರು. ಯಾಕೆ? ಭೂಸ್ವಾಧೀನ ಮಾಡಿದ ನಂತರ ಜಾಗಾ ಕೊಡ್ತೀವಿ ಅಂತು ನಮ್ಮ ಸರ್ಕಾರ. ಭೂಸ್ವಾಧೀನ ಅಂದ್ರೆ ಸುಮ್ಮನೆಯಲ್ಲ. ವಿಷಯ ಕೋರ್ಟಿಗೆ ಹೋಗುತ್ತೆ. ಕನಿಷ್ಟ ೨೫ ವರ್ಷಗಳನ್ನು ಅದು ತಗೋಳುತ್ತೆ. ಆದ್ರೆ ಮೋದಿ ತಕ್ಶಣವೇ ೧೦೦೦ ಎಕರೆ ಕೊಡಿಸಿದ್ರು. ಹೇಗೆ? ಅಲ್ಲಿನ ರೈತರಿಗೆ 'ಇದ್ರಿಂದ ಇಂತಿಂಥಾ ಪ್ರಯೋಜನವಿದೆ. ಕೃಷಿಗಿಂತ ಇದರಲ್ಲಿ ಹೆಚ್ಚಿನ ಲಾಭ ಇದೆ, ನಿಮಗೂ ನುಕರಿ, ಲಾಭ ಇದೆ' ಅಂತೆಲ್ಲ ಸರಿಯಾಗಿ ತಿಳಿ ಹೇಳಿದ್ರು. ಗುಜರಾತ್ ಜನ ಪಕ್ಕಾ
ವ್ಯವಹಾರಸ್ಥರು. ವ್ಯಾಪಾರದಲ್ಲಿ ಮುದುವರೆದ ಜನರು. ತಕ್ಷಣ ಒಪ್ಪಿಕೊಂಡ್ರು. ಮತ್ತು ಇದರಲ್ಲಿ ಸರ್ಕಾರದ ಮಧ್ಯಸ್ಥಿಕೆ ಇರಲಿಲ್ಲ. ರೈತರೇ ನೇರವಾಗಿ ಟಾಟಾ ಕಂಪನಿಯವರೋಂದಿಗೆ ವ್ಯವಹಾರ ಮಾಡಲು ಬಿಡಲಾಯಿತು. ಇದನ್ನು ಜನರು ಅರ್ಥ ಮಾಡಿಕೊಂಡ್ರು. ಕಂಪನಿಯವರ ಜೊತೆ ನೇರವಾಗಿ ಮಾತಾಡಿ ಜಮೀನನ್ನು ಲಾಭದ ಬೆಲೆಗೆ ಮಾರಿದರು. ಈಗ ನ್ಯಾನೋ ಕಾರು ತಯಾರಾಗಿ ಹೊರಬರಲು ಪ್ರಾರಂಭಿಸಿದೆ.
     ನಮ್ಮಲ್ಲಿ ಇಂತಹದ್ದೇನಿದೆ? ಇಂತಹ ನಾಯಕರು ನಮ್ಮಲ್ಲಿ ಯಾಕಿಲ್ಲ? ದಿನಾ ಕಾದಾಟ ಕಚ್ಚಾಟ ಬಿಟ್ರೆ ಏನಿದೆ ನಮ್ಮಲ್ಲಿ?
ಈಗಂತೂ ನನಗೆ ಬೆಳಗಿನ ಪೇಪರ್ ಓದಲೂ ಅಸಹ್ಯವೆನಿಸುತ್ತದೆ. ಟಿ.ವಿ ನ್ಯೂಸ್ ನೋಡಲೂ ಬೇಸರವಾಗುತ್ತದೆ. ಏನಿದೆ ನಮ್ಮಲ್ಲಿ?  development ಆಗಲಿ, ಹೀಗೆ ಮಾಡಿದರೆ ಹೀಗೆ ಆಗುತ್ತದೆ ಅನ್ನೋ ಅರ್ಥಶಾಸ್ತ್ರದ ರೀತಿಯ ವಿಚಾರ ಏನಿದೆ ಇಲ್ಲಿ?ತಿಳಿದವರು ಏನು ಮಾಡಬೇಕು ಅಂತ ಚರ್ಚೆ ಮಾಡ್ಬೇಕು.ಆದ್ರೆ ಅದು ಆಗ್ತಿದೆಯಾ?
     ವಿಶ್ವ ಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ನಾನು ಹೇಳೊದೇನೆಂದರೆ, ಪ್ರತೀ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಆಗ್ತಾನೇ ಇರುತ್ತೆ. ಬೆಳಗಾವಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಈಗ ಒಂದು ಸಮ್ಮೇಳನ ಆಗುತ್ತೆ ಅಷ್ಟೆ. ನಮಗೆ ಸಾವಿರ ಎರಡು ಸಾವಿರ ವರ್ಷದ ಇತಿಹಾಸ ಇದೆ, ಪಂಪನಿಂದ ಆರಂಭವಾಗಿದ್ದು, ಹಾಗೆ ಹೀಗೆ ಅಂತ ಹೇಳಿಕೊಳ್ಳುವುದರಲ್ಲಿ ಏನು ಪುರುಷಾರ್ಥ ಸಾಧಿಸಿದಂತಾಗುತ್ತೆ? ಬದಲಾಗಿ ನಮ್ಮ ಕರ್ನಾಟಕ ಈಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಏನು ಬೇಕು ಎಂಬುದನ್ನು ಆಲೋಚನೆ ಮಾಡಬೇಕು. ಇದನ್ನು ಎಲ್ಲ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕು. ಆ ಥರದಲ್ಲಿ seminarಗಳು ಆಗ್ಬೇಕು.
     ಎಲ್ಲಿಯವರೆಗೆ ನಾವು ಆರ್ಥಿಕವಾಗಿ ಸದೃಡವಾಗಿರುವುದಿಲ್ಲವೋ ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಕೂಡಾ ಸದೃಡವಾಗಲು ಸಾಧ್ಯವಿಲ್ಲ. ಈಗ ನೋಡಿ National health schemeನ ವತಿಯಿಂದ ಡಾಕ್ಟರ್ ಗಳಾಗಿ ಕರ್ನಾಟಕದಿಂದ ಸುಮಾರು ಜನ ಇಂಗ್ಲೆಂಡ್ ಗೆ ಹೋದರು. ಅವರು ಅಲ್ಲಿ ಸೆಟಲ್ ಆಗೋದರ ಜೊತೆಗೆ ತಮ್ಮ ಮಕ್ಕಳನ್ನೂ ಸಂಪೂರ್ಣವಾಗಿ ಬ್ರಿಟಿಷರನ್ನಾಗಿ ಮಾಡಿದರು. ಮನೆಯಲ್ಲಿ ಗಂಡ ಹೆಂಡತಿ ಸ್ವಲ್ಪ ಕನ್ನದ ಮಾತನಾಡಿದರೂ ಮಕ್ಕಳ ಜೊತೆಗೆ ಮಾತ್ರ ಬರೀ ಇಂಗ್ಲಿಷ್. ಇದರಿಂದ ಸಂಪೂರ್ಣವಾಗಿ ಅವರು ಬ್ರಿಟಿಷರೇ  ಆಗಿಬಿಟ್ಟರು. ಆದರೆ ಗುಜರಾತಿನವರು ಏನು ಮಾಡಿದ್ರು? ಅವರು ಕೇವಲ ನೌಕರಿ ನೆಚ್ಚಿಕೊಂಡು ಅಲ್ಲಿಗೆ ಹೋದವರಲ್ಲ.ಅವರು ಜೀವನೋಪಾಯಕ್ಕೆ ಸೂಪರ್ ಮಾರ್ಕೆಟ್ ತರಾ ಎಲ್ಲಾ ಥರಾ ಸಾಮಗ್ರಿಗಳೂ ಸಿಗುವ ಕಾರ್ನರ್ ಶಾಪ್ ಗಳನ್ನು ಶುರು ಮಾಡಿದರು. ನೌಕರರನ್ನು ಇಟ್ಟುಕೊಳ್ಳದೇ ಮಾಲೀಕರು ಮಧ್ಯರಾತ್ರಿಯಾದರೂ ತಾವೇ ಸ್ವತಃ ಕೆಲಸ ಮಾಡಿದರು. ಮನೆಯಿಂದಲೇ ಚಪಾತಿ ತರಿಸಿ ತಿಂದು ಅಂಗಡಿ ತೆರೆದಿಡುತ್ತಿದ್ದರು. ರಾತ್ರಿ ಎಷ್ಟೇ ತಡವಾಗಿ ಬಂದರೂ ಇವರ ಅಂಗಡಿ ತೆರೆದಿರುತ್ತದೆ ಅನ್ನೋದು ಗೊತ್ತಾದಾಗ ಗ್ರಾಹಕರು ಇಲ್ಲಿಗೆ ಬರಲಾರಂಭಿಸಿದರು. ಹೀಗಾಗಿ ಇವರು ಚೆನ್ನಾಗಿ ಸಂಪಾದನೆ ಮಾಡಲು ಆರಂಭಿಸಿ ಕ್ರಮೇಣ ರಿಯಲ್ ಎಸ್ಟೇಟ್ ಪ್ರಾಪರ್ಟಿ purchase ಮಾಡಲು ಆರಂಭಿಸಿದರು. ನಂತರ ದೊಡ್ಡ ದೊಡ್ಡ ಅಂಗಡಿಗಳನ್ನು ತೆರೆದು ಆರ್ಥಿಕವಾಗಿ ಪ್ರಬಲರಾದರು. ಈಗ ಇಂಗ್ಲೆಂಡ್ ನಂಥ ಸಣ್ಣ ದೇಶದಲ್ಲೇ ಎರಡೆರಡು ಗುಜರಾತಿ ಭಾಷೆಯ ಪತ್ರಿಕೆಗಳನ್ನು ಮೂರನೇ ಪೀಳಿಗೆಯ ಗುಜರಾತಿಗಳು ನಡೆಸುತ್ತಿದ್ದಾರೆ. ದಸರಾ ಬಂದಾಗ ಈಗಲೂ ಅಲ್ಲಿರೋ ಗುಜರಾತಿ ಮಹಿಳೆಯರು ಗರ್ಭಾ ನೃತ್ಯ ಮಾಡುತ್ತಾರೆ. ಇವರಲ್ಲಿ ಮೂರನೇ ಪೀಳಿಗೆಯ ಜನರೂ ಶಾಮೀಲಾಗುತ್ತಾರೆ. ಅಷ್ಟೇ ಅಲ್ಲ, ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಗುಜರಾತ್ ಗೆ ಬರೋದು, ಗುಜರಾತ್ ನಲ್ಲಿರೋರು ಇಂಗ್ಲೆಂಡ್ ಗೆ ಹೋಗೋದು ತುಂಬಾ common. ಅಹ್ಮದಾಬಾದ್ ನಲ್ಲಂತೂ british airways flight  ದಿನಾ ಅಲ್ಲಿಂದ ಗುಜರಾತ್ ಗೆ ಹೋಗುತ್ತೆ. ಅಲ್ಲಿ announcement ಎಲ್ಲಾ ಗುಜರಾತಿಯಲ್ಲೇ ನಡೆಯುತ್ತೆ. ಯಾರೊಬ್ಬರೂ ಇಂಗ್ಲಿಷ್ ಮಾತಾಡೊಲ್ಲ. ವರ್ಷಕ್ಕೆ ನಾಲ್ಕು ಬಾರಿ ಭಾರತಕ್ಕೆ ಬರ್ತಾರೆ, ದಿನಕ್ಕೆ ನಾಲ್ಕು ಬಾರಿ ಭಾರತದಲ್ಲಿರೋ ಸಂಬಂಧಿಗಳಿಗೆ ಫೋನ್ ಮಾಡ್ತಾರೆ. ಆ ಖರ್ಚನ್ನೆಲ್ಲ ಅಂಗಡಿ ವೆಚ್ಚಕ್ಕೆ ಹಾಕ್ತಾರೆ. ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಆರ್ಥಿಕವಾಗಿ ಸದೃಡರು. ಭಾರತದಲ್ಲಿರೋರೂ ಪ್ರಬಲರೇ ಆಗಿದ್ದಾರೆ.
     ಆದರೆ ನಮ್ಮ ಕರ್ನಾಟಕದವರು ತಮ್ಮ ಮಕ್ಕಳಿಗೆ ಕನ್ನಡ ಕಲಿಸೋಲ್ಲ. ನೌಕರಿ ನೆಚ್ಚಿಕೊಂಡಿರೋ ನಮ್ಮವರಿಗೆ ವರಮಾನವೂ ಸೀಮಿತವಾಗೇ ಇರುತ್ತದೆ. ಹೀಗಾಗಿ ಅಲ್ಲಿ ವಾಸಿಸೋ ಕನ್ನಡದವರನ್ನು ಅವರ ಸಂಭಂಧಿಗಳು ಹೋಗಿ ಭೇಟಿಯಾಗೋದು ಕಷ್ಟವೇ. ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಸಾಂಸ್ಕೃತಿಕವಾಗಿ ನಾವು ಪ್ರಬಲರಾಗಬೇಕೆಂದರೆ ಮೊದಲು ನಾವು ಆರ್ಥಿಕವಾಗಿ ಸಶಕ್ತರಾಗಲೇಬೇಕು.
     ಈಗ ಅವಲಂಭನೆಯಾಗ್ತಿರೋದು ಕೇವಲ ಸಾಫ್ಟವೇರ್. ಆದರೆ ವಿದೇಶಿ ಕಂಪನಿಗಳವರು ಇಂಗ್ಲಿಷ್ ನಲ್ಲಿ ಮಾತಾಡಿದಾಗ ನಮ್ಮ ಹುಡುಗರೂ ಇಂಗ್ಲಿಷ್ ನಲ್ಲೇ ಮಾತಾಡಬೇಕು. ಸಾಂಸ್ಕೃತಿಕವಾಗಿ ಅವರು ತಮ್ಮನ್ನು ತಾವು ಮಾರಿಕೊಂಡರು. ಅದಕ್ಕೆ ಸಾಫ್ಟವೇರ್ ಅನ್ನುವುದು ಒಂದು ಸ್ವತಂತ್ರ ಉದ್ಯಮ ಅಲ್ಲವೇ ಅಲ್ಲ.
     ಜಪಾನಿನವರು ಎರಡನೇ ವಿಶ್ವ ಸಮರದ ನಂತರ ಆರ್ಥಿಕವಾಗಿ ಎಷ್ಟು  ಗಟ್ಟಿಯಾದರೆಂದರೆ ಅಮೆರಿಕದ ಕಾರು ಇಂಡಸ್ಟ್ರಿ, ಎಲೆಕ್ಟ್ರಾನಿಕ್ ಇಂಡಸ್ಟ್ರಿ ಎಲ್ಲವನ್ನೂ ತಮ್ಮ ಕೈಯಲ್ಲಿ ಹಿಡಕೊಂಡ್ರು. ಅಷ್ಟೇ ಅಲ್ಲ ನ್ಯೂಯಾರ್ಕಿನ ಮ್ಯಾನಹಟನ್ ಮಲ್ಟೀಸ್ಟೋರಿ ಬಿಲ್ಡಿಂಗ್ ಗಳನ್ನೆಲ್ಲ ಕೊಂಡುಕೊಂಡ್ರು. ವ್ಯವಹಾರಕ್ಕೆ ಮಾತ್ರ ಜಪಾನಿನವರು ಇಂಗ್ಲಿಷ್ ಕಲಿತರು. ಆದರೆ ಅವರು ತಮ್ಮ ಸಂಸ್ಕೃತಿಯನ್ನು ಬಿಡಲಿಲ್ಲ.
  ಆದ್ದರಿಂದ ನಾವು ಮೊದಲು ಆರ್ಥಿಕವಾಗಿ ಪ್ರಬಲರಾಗುವುದು ಮುಖ್ಯ. ಅದರ ಜೊತೆಗೆ ನಮ್ಮ ಸಂಸ್ಕೃತಿ ಯ ಪರಿಜ್ಞ್ಯಾನವೂ ನಮಗಿರಬೇಕು. ಸುಮಾರು ೪೦ ವರ್ಷದ ಹಿಂದಿನ ಮಾತು. ಬೆಂಗಳೂರಿನಲ್ಲಿ ಕಾಟನ್ ಪೇಟೆ, ಬಳೆಪೇಟೆ, ಅಕ್ಕಿಪೇಟೆ ಇದೆಯಲ್ಲ?ಅಲ್ಲಿನ ಓನರ್ ಗಳೆಲ್ಲ ಗುಜರಾತಿಗಳು. ಅವರು ಲೆಕ್ಕ ಬರೆಯೋದು ಗುಜರಾತಿ ಭಾಷೆಯಲ್ಲಿ. ಲೆಕ್ಕ ಬರೆಯೋರು ಯಾರು ಗೊತ್ತೇ?ಕನ್ನಡಿಗರು! ಲೆಕ್ಕ ಬರೆಯೋವಷ್ಟು ಗುಜರಾತಿ ಭಾಷೆ ಕಲಿತು ನಮ್ಮ ಕನ್ನಡಿಗರು ಅವರ ಕೈಕೆಳಗೆ ಕೆಲಸ ಮಾಡಿ ಬರೆಯೋದು. ಹೀಗೆ ಬರೀ ಲೆಕ್ಕ ಬರೆಕೊಂಡು ಕೂರೋದು ಯಾಕೆ? ಇವತ್ತು ನಮ್ಮ ಕರ್ನಾಟಕಕ್ಕೆ ಬೇಕಾಗಿರೋದು ಆರ್ಥಿಕ ಪ್ರಾಬಲ್ಯ. ಈಗ ಟಿ.ವಿನೇ ತೊಗೊಳ್ಳಿ. ಎಲ್ಲ ಚಾನೆಲ್ ಗಳಲ್ಲೂ ಮಧ್ಯಾಹ್ನ ಅಡುಗೆ ಬಗ್ಗೆ ಕಾರ್ಯಕ್ರಮ ಬರುತ್ತೆ. ಅದರಲ್ಲಿ ಶೇ.೭೫ರಷ್ಟು ಇಂಗ್ಲೀಷೇ ಇರುತ್ತೆ. ಇಂಗ್ಲೀಷ್ ಬಳಸ್ಬೇಡಿ ಅಂತಾ ದಬಾಯಿಸಿ ಹೇಳೋ ಹಕ್ಕೇ ನಮಗಿಲ್ಲ. ಏಕೆಂದರೆ ಆ ಚಾನೆಲ್ ಗಳ ಓನರ್ ಗಳು ಕನ್ನಡದವರಲ್ಲ.
     ವಿಶ್ವೇಶ್ವರಯ್ಯ ದಿವಾನರಾಗಿದ್ದಾಗ ಎಕನಾಮಿಕ್ ಕಾನ್ಫರೆನ್ಸ್ ಪ್ರಾರಂಭಿಸಿದ್ರು. ಏಕೆಂದರೆ ನಮ್ಮಲ್ಲಿ ಯಾವ ಯಾವ ರೀತಿಯ ಆರ್ಥಿಕ ಅಭಿವೃದ್ಧಿ ಆಗಬೇಕು ಅನ್ನೋದು ಜನರಿಗೆ ತಿಳಿಸಲು.ಕನ್ನದ ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದ್ದೂ ಅವರೆ. ಆದರೆ ಅವರ ಹೆಸರನ್ನು ಇವತ್ತು ಯಾರೂ ಹೇಳೋಲ್ಲ. ಆಮೇಲೆ ಅಸೆಂಬ್ಲಿ ಅಂತ ಇತ್ತು. ಅಲ್ಲಿ ಕನ್ನಡದಲ್ಲಿ ಚರ್ಚೆ ಮಾಡಿಸಲು ಶುರು ಮಾಡಿದೋರು ವಿಶ್ವೇಶ್ವರಯ್ಯನವರು. ಕನ್ನಡಿಗರಿಗೆ ಅದೆಲ್ಲ ತಿಳೀಬೇಕು ಅಂತ. ತಿಪಟೂರಿನಲ್ಲಿ ತೆಂಗಿನ ಚಿಪ್ಪು ಸೌದೆಗೆ ಉಪಯೋಗಿಸಿ ವೇಸ್ಟ್ ಮಾಡ್ತೀರಿ, ಅದರಲ್ಲಿ ಕಾಯರ್ ಇಂಡಸ್ಟ್ರಿ ಮಾಡಬಹುದು ಅಂತ ಐಡಿಯಾ ಕೊಟ್ಟವರು ವಿಶ್ವೇಶ್ವರಯ್ಯನವರು. ಅಷ್ಟೇ ಅಲ್ಲ, ಜನಪ್ರತಿನಿಧಿಯಾಗಿ ಬಂದವರಿಗೆ ಹೀಗೆಲ್ಲ ಆಲೋಚನೆ ಮಾಡೋದಕ್ಕೆ ಯಾಕೆ ಬರಲ್ಲ ಎಂದೂ ಅವರು ದಬಾಯಿಸಿದ್ದರು. ಅವರ ತರಹದ ಚಿಂತನೆಗಳು ನಮಗೆ ಮಾದರಿಯಾಗಬೇಕು.
     ಕರ್ನಾಟಕದವರಿಗೆ ಸಂಕೋಚದ ಸ್ವಭಾವ. ವೈಯಕ್ತಿಕವಾಗಿ ಮಾಡುವ ಸಾಮರ್ಥ್ಯವಿದ್ದರೂ ಇನ್ನೊಬ್ಬರ ಪ್ರೇರಣೆ ಪ್ರೋತ್ಸಾಹವನ್ನು ಎದುರು ನೋಡುವ ದೌರ್ಬಲ್ಯ. ಕರ್ನಾಕದ ಆತ್ಮಬಲವನ್ನು ಕಂಡುಕೊಳ್ಳಲು ಇಂತಹ ಸಮ್ಮೇಳನಗಳ ಬಳಕೆಯಾಗಬೇಕು. ಮುಖ್ಯವಾಗಿ ಕರ್ನಾಟಕದ ಉದ್ಯಮಿಗಳು ಒಟ್ಟು ಸೇರಿ ನಾವು ಹೇಗೆ ಬೆಳೀಬೇಕು ಎಂಬುದನ್ನು ಚರ್ಚಿಸಲು ಮುಂದೆ ಬರಬೇಕು. ಚರ್ಚೆ ಮಾಡಿ ನಿರ್ಧಾರ ತಗೊಳ್ಳಬೇಕು. ತಮಿಳುನಾಡಿನಲ್ಲಿ ತಮಿಳು ಉದ್ಯಮಿಗಳು ತಕ್ಕಮಟ್ಟಿಗೆ ಇದ್ದರೂ ಬೇರೆ ಬೇರೆ ರಾಜ್ಯದ ಉದ್ಯಮಿಗಳೂ ಇದ್ದಾರೆ. ಅವರೂ ತಮಿಳರೇ ಆಗುತ್ತಾರೆ. ಹೊರಗಡೆಯಿಂದ ಯಾರೇ ಬಂದರೂ ಅಲ್ಲಿನ ನಾಯಕರು ಸವಲತ್ತು ಕೊಡುತ್ತಾರೆ. ಆದರೆ ಲೇಬರ್ ಫೋರ್ಸ್ ಮಾತ್ರ ಅವರದೇ. ಕೆಲಸಕ್ಕೆ ತಮಿಳಿನವರನ್ನೇ ತೆಗೆದುಕೊಳ್ಳುವಂಥ ಒತ್ತಡದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ. ಇದಕ್ಕೆಲ್ಲ ಬೇಕಾದದ್ದು ರಾಜಕೀಯ ಸಂಕಲ್ಪ ಶಕ್ತಿ ಅಷ್ಟೇ. ಇದು ನಮ್ಮಲ್ಲಿ ಯಾಕೆ ಮಾಡೋಲ್ಲ?
     ಇನ್ನೊಂದು ವಿಷಯ ಏನೆಂದರೆ ಇಂಜಿನಿಯರಿಂಗ್ ಕಾಲೇಜುಗಳು ನಮ್ಮಲ್ಲಿ ಜಾಸ್ತಿಯಾಗಿ ಯುವಜನತೆ ಅಲ್ಲಿ ನುಗ್ಗಲು ಶುರು ಮಾಡಿದರು. ಹೀಗಾಗಿ ಐ.ಎ.ಎಸ್ ಕೇಡರ್ ನಲ್ಲಿ ಕರ್ನಾಟಕದವರು ಅಷ್ಟಾಗಿ ಇಲ್ಲವೇ ಇಲ್ಲ. ಆಡಳಿತಾತ್ಮಕ ಮಟ್ಟದಲ್ಲಿ ಕನ್ನಡದವರೇ ಇಲ್ಲ. ಹೊರಗಿನಿಂದ ಬಂದವರಿಗೆ ಏನು ಗೊತ್ತಾಗುತ್ತೆ? ಈಗ ತೆಲುಗಿನವರು, ಬಿಹಾರ್ ನವರು ಮುಂದೆ ಬರುತ್ತಿದ್ದಾರೆ. ಕನ್ನಡದವರು ಮಾತ್ರ ಮುಂದೆ ಬರುತ್ತಿಲ್ಲ. ತೆಲುಗಿನ ಸ್ವಾಭಿಮಾನ ಅನ್ನೋದಿದೆಯಲ್ಲ, ಎನ್.ಟಿ.ರಾಮರಾವ್ ಅವರು ತೆಲುಗಿನ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು.ದೊಡ್ದ ಕೆಲಸ ಮಾಡಿದರು. ಒಂದೇ ಪಕ್ಷ, ಒಂದೇ ಗುಲಾಮಗಿರಿ, ಸೆಂಟ್ರಲ್ ನಲ್ಲಿ ಕೈಮುಗಿದುಕೊಂಡು ದೈನೇಸಿಯಲ್ಲಿ ದೇಶ ಆಳೋದು ಯಾವ ದೇಶಕ್ಕೂ, ರಾಜ್ಯಕ್ಕೂ ಒಳ್ಳೆಯದಲ್ಲ. ಎನ್.ಟಿ.ಆರ್ ನಟನಾಗಿ ಅವರು ಜನತೆಯ ಮನಸ್ಸನ್ನು ಗೆದ್ದಿದ್ದರು. ಅಂತಹ ಶಕ್ತಿಯಾಗಲೀ, ಪರ್ಸನಾಲಿಟಿ ಸ್ಟ್ರೆಂಗ್ತ್ ಆಗಲೀ ನಮ್ಮಲ್ಲಿಲ್ಲ. ನಂತರ ಅವರು ತಮ್ಮ ಅಳಿಯ ಚಂದ್ರಬಾಬು ನಾಯಿಡು ಅವರನ್ನು ಬಿಟ್ಟು ರಾಷ್ಟ್ರರಾಜಕಾರಣಕ್ಕೆ ಹೋದರು. ನಾಯಿಡೂ ಅತ್ಯುತ್ತಮ ಆಡಳಿತಗಾರ. ಈ ಕಾರಣದಿಂದಲೇ ಅವರು ಆಂಧ್ರವನ್ನು ಮುಂದೆ ತಂದರು. ಆದರೆ ಅವರ ಕುಟುಂಬದಲ್ಲೇ ಒಡಕು ಬಂದು ಎನ್.ಟಿ.ಆರ್ ತಮ್ಮ ಇಮೇಜ್ ಕಳೆದುಕೊಂದರು.ಇದು ಆಂಧ್ರದ ದುರಾದೃಷ್ಟ. 
     ಬ್ಯೂರಾಕ್ರಸಿ ಅನ್ನೋದು ತಮಿಳುನಾಡಿನಲ್ಲಿ ಅಣ್ಣಾದೊರೆ ಆಳ್ವಿಕೆಯಲ್ಲಿದ್ದಾಗಲೂ ಕಂಡು ಬಂದಿತ್ತು. ಆಗಿನಿಂದಲೂ ಒಟ್ಟಾರೆ ಅಲ್ಲಿ ತಮಿಳು ವಾತಾವರಣ, ತಮಿಳು ಭಾಷೆಯ ಪ್ರಯೋಗ, ತಮಿಳರಿಗೆ ಆದ್ಯತೆ ಅಲ್ಲಿ ಸಿಗಲಾರಂಭಿಸಿತು. ನಂತರ ಎಲ್ಲ ಸರ್ಕಾರಗಳೂ ಅದೇ ಮಾದರಿ ಅನುಸರಿಸಿದವು. ಶಾಸನವಿಲ್ಲದೇ ತಮಿಳು ವಾತಾವರಣ ನಿರ್ಮಾಣವಾಯಿತು. ಈ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳೋದು ಈಗಿನ ಸಂದರ್ಭಕ್ಕೆ ಸೂಕ್ತವಲ್ಲವೆ?
     ನಮ್ಮಲ್ಲೂ ನರೇಂದ್ರ ಮೋದಿ  ತರಹಾ ಸ್ಟ್ರಾಂಗ್ ಲೀಡರ್ ಬರಬೇಕು ಅನ್ನುತ್ತಾರೆ. ಆದರೆ ನಾವು ಅಪೇಕ್ಷೆ ಪಟ್ಟಂತೆ ಲೀಡರ್ ಬರೋದಿಲ್ಲ. ಮೋದಿ ಗುಜರಾತಿನಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ. ಎಲ್ಲಕ್ಕಿಂತಲೂ ಮುಖ್ಯವೆಂದರೆ ಆತ ಬ್ರಹ್ಮಚಾರಿಯಾಗಿದ್ದು ಆತನ ಇಮೇಜ್ ಬೆಳೆಯಲು ಕಾರಣವಾಯಿತು. ಸ್ವಂತಕ್ಕೆ ಏನೂ ಆಸ್ತಿ ಮಾಡಬೇಕೆಂದೇನು ಅವರಿಗಿಲ್ಲ. ಅದಕ್ಕೆ ರಾಜ್ಯಕ್ಕೆ ಏನು ಪ್ರಗತಿ ಬೇಕು ಎಂಬ ಯೋಚನೆ ಮಾಡಿದ್ದಾರೆ. ಎರಡನೆಯದಾಗಿ ಅವರು ಗಾಣಿಗರ ಸಮುದಾಯದವರು. ದೊಡ್ಡ ಉದ್ಯಮಿಯಲ್ಲ. ಬಡತನ ಕಂಡವರು, ಬಲ್ಲವರು. ಆರಂಭದೊಳಗೆ ಆತನಿಗೂ Self development ಕಷ್ಟವೇ ಆಗಿತ್ತು. ಪವರ್ ಸಿಕ್ಕಕೂಡಲೇ ಆತ development ಶುರು ಮಾಡಿಬಿಟ್ರು. ಗುಜರಾತಿನವರು ಬುದ್ಧಿವಂತರು. ಆರ್ಥಿಕವಾಗಿ ಏನು ಮಾಡಿದರೆ ಏನಾಗುತ್ತೆ ಅನ್ನೋದು ತಿಳಕೊಂಡು ಅದನ್ನು ನಂಬಿದರು. ಮೋದಿ ಅವರು ತಮ್ಮ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡರು. ಆತ ನಾಲ್ಕೂವರೆಗೆ ಎದ್ದು ಯೋಗಾಸನ, ಪ್ರಾಣಾಯಾಮ ಮಾಡ್ತಾರೆ. ಸ್ನಾನಾ ಮುಗಿಸಿ ಒಂದು ಲೋಟ ಗಂಜಿ ಕುಡಿದು ಆರೂವರೆ ಹೊತ್ತಿಗೆ ಗೃಹ ಕಚೇರಿಗೆ  ಬರ್ತಾರೆ. ಅಷ್ಟೊತ್ತಿಗೆ ಅವರ ಅಸಿಸ್ಟಂಟ್ ಗಳು ಎಲ್ಲ ಪೇಪರ್ ಓದಿ ಮಾರ್ಕ್ ಮಾಡಿ ಇಡಬೇಕು. ಅದ್ರಲ್ಲಿ ಏನಾದರೂ ಒಂದು ಹಳ್ಳಿಯಲ್ಲಿ ಸರಿಯಾದ ವೈದ್ಯಕೀಯ ಗಮನವಿಲ್ಲದೇ ಗರ್ಭಿಣಿ ಸತ್ತು ಹೋದಳು ಅನ್ನೋ ಸುದ್ಧಿ ಇದ್ದರೆ ತಕ್ಷಣ ಅವರು ಸಂಬಂಧ ಪಟ್ಟ ಡೈರೆಕ್ಟರ್ ಆಫ್ ಮೆಡಿಕಲ್ ಸರ್ವಿಸಸ್ ನ ವೈದ್ಯಕೀಯ ಅಧಿಕಾರಿಯನ್ನು ಎಬ್ಬಿಸಿ, 'ನಿಮಗೆ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ನಾವು ಬೇರೆ ಯಾರ ಹತ್ತಿರಾನಾದ್ರೂ ಮಾಡಿಸ್ತೀವಿ' ಅಂತ ಮುಖ ಮುರಿದ ಹಾಗೆ ಹೇಳ್ತಾರೆ. ಬೇರೆ ಯಾರು ಪತ್ರಿಕೆ ಓದಿ ಇಂಥ ಕಾರ್ಯ ಕೈಗೊಳ್ಳುತ್ತಾರೆ? ಅಂಥ ನೈತಿಕ ಹಕ್ಕನ್ನು ಅವರು ಉಳಿಸಿಕೊಂಡಿದ್ದರಿಂದಾನೇ ಅಧಿಕಾರಿಗಳು ಹೆದರ್ತಾರೆ. ಜನಗಳೂ ಅವರನ್ನು ಇಷ್ಟಪಡುತ್ತಾರೆ. ಅಲ್ಲಿ ಲೇಬರ್ ಕ್ಲಾಸ್ ನಿಂದ ಹಿಡಿದು ಇಂಡಸ್ಟ್ರಿಯಲಿಸ್ಟ್ ವರೆಗೆ ಎಲ್ಲರೂ ಅವರನ್ನು ಪ್ರಶಂಸಿಸುತ್ತಾರೆ.
     ಪ್ರಾದೇಶಿಕ ಅಭಿವೃದ್ಧಿಯ ಜೊತೆಗೆ, ನಮಗೆ ಒಂದು ಒಟ್ಟಾರೆ ರಾಷ್ಟ್ರೀಯ ದೃಷ್ಟಿಯೂ ಬೇಕು. ಲಾಲು ಪ್ರಸಾದ್ ಯಾದವ್ ರೈಲ್ವೇ ಮಂತ್ರಿಯಾದಾಗ ತಮ್ಮ ರಾಜ್ಯಕ್ಕೆ ಏನು ಬೇಕೋ ಎಲ್ಲ ಮಾಡಿದ್ರು, ನೀನು ಏನ್ ಮಾಡ್ತಾ ಇದ್ದೀಯಾ? ನಿನ್ನ ರಾಜ್ಯಕ್ಕೆ ಮಾತ್ರ Favour ಮಾಡಿ ಪಕ್ಷಪಾತ ಮಾಡ್ತಾ ಇದ್ದೀಯಾ ಅಂತ ಕೇಳೋ ತಾಕತ್ತು ಕೇಂದ್ರಕ್ಕೆ ಇರಲಿಲ್ಲ. ಏಕೆಂದರೆ ಅವರಿಗೆ ವಿರುದ್ಧ ಹೋದರೆ ಅವರ ಸರ್ಕಾರ ಉಳೀತಿರಲಿಲ್ಲ. ಅದೇ ರೀತಿ ಈಗ ಮಮತಾ ಬ್ಯಾನರ್ಜಿ ಎಲ್ಲ ಕೋಲ್ಕತ್ತಾಕ್ಕೆ ಅನುಕೂಲ ಮಾಡ್ತಿದ್ದರೂ ಯಾಕೆ ಅಂತ ಕೇಳೋ ಶಕ್ತಿ ಮನಮೋಹನ್ ಸಿಂಗ್ ಅವರಿಗಿಲ್ಲ. ಹಾಗೆ ಮಾಡಿದರೆ ಯು.ಪಿ.ಎ ಸರ್ಕಾರ ಉಳಿಯೋದು ಕಷ್ಟವೇ. ಈ ಥರದ ಸನ್ನಿವೇಶ ಇದೆಯೇ ಹೊರತು ಇಡೀ ಭಾರತದ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಏನಾಗಬೇಕು? ಅದು ರೈಲಾಗಿರಬಹುದು, ಎಲೆಕ್ಟ್ರಿಸಿಟಿ, ಇಂಡಸ್ಟ್ರಿ ಆಗಿರಬಹುದು. ಇದೆಲ್ಲವನ್ನೂ ಸರಿಯಾಗಿ ನೋಡುವಂಥ ರಾಷ್ಟ್ರೀಯ ದೃಷ್ಟಿ ನಮ್ಮಲ್ಲಿಲ್ಲ.
     ನೆಹರೂ ಕಾಲದಲ್ಲಿ ರಷ್ಯನ್ ಮಾದರಿ ಪ್ಲಾನಿಂಗ್ ಕಮೀಷನ್ ಮಾಡಿದ್ರು,ಅದೂ ಅಷ್ಟೇನೆ. ಎಕನಾಮಿಕ್ ಥಿಂಕಿಂಗ್ ಅನ್ನೋದು ಇದ್ದರೆ ಈ ದೇಶದ ಸಮಗ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಇನ್ನು ಏನೇನು ಅಭಿವೃದ್ಧಿ ಆದರೆ ಚೆನ್ನಾಗಿರುತ್ತದೆ, ಬ್ಯಾಲೆನ್ಸ್ ಆಗುತ್ತೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ರಸ್ತೆ, ರೈಲು, ವಿದ್ಯುತ್ ಎಲ್ಲದರ ಅಭಿವೃದ್ಧಿ ಹೇಗೆ ಎಂಬುದನ್ನೆಲ್ಲ ಮಾಡಿ ಉದ್ಯಮಿಗಳಿಗೆ ಮತ್ತು ರಾಜ್ಯಗಳಿಗೆ honest advice ಮಾಡ್ಬೇಕು. ಇದು ಪ್ರಾಮಾಣಿಕ ಸಲಹೆ ಯಾಗಿರಬೇಕೇ ವಿನಾ ಸವಾರಿಯಾಗಿರಬಾರದು. ಆದರೀಗ ನಡೀತಿರೋದು ಸವಾರಿ ವಿನಾ ಸಲಹೆ ಅಲ್ಲ.
     ರಾಷ್ಟ್ರೀಯ ಅನ್ನೋವಾಗ ಇನ್ನೂ ಒಂದು ವಿಷಯ ನೆನಪಿಡಬೇಕು. 'ಬೇರೆ ನಾಯಕರುಗಳೆಲ್ಲ ಒಂದೊಂದು ರಾಜ್ಯಕ್ಕೆ ಸೇರಿದವರು. ಸರ್ದಾರ್ ಪಟೇಲ್ ಗುಜರಾತಿ. ಗೋವಿಂದ್ ವಲ್ಲಭ್ ಪಂತ್ ಯು.ಪಿ.ಗೆ ಸೇರಿದವರು. ಯಾವುದಕ್ಕೂ ಸೇರದೇ ಇರುವವರು ನೆಹರೂ. ಅದಕ್ಕೆ ಅವರೇ ರಾಷ್ಟೀಯ ನಾಯಕರಾಗಲು ಅರ್ಹರು', ಅನ್ನೋ ಇಮೇಜ್ ಕೊಟ್ಟವರು ನಮ್ಮ ಮಾಧ್ಯಮದವರು. ಮುಂದೆ ಇಂದಿರಾ ಗಾಂಧಿಗೂ ಅಂತಹ ಇಮೇಜ್ ಕೊಟ್ಟರು. ರಾಜೀವ್ ಗಾಂಧಿಗೂ ಅದನ್ನೇ ಕೊಟ್ತರು. ಅಂದರೇ ಏನರ್ಥ? ಎಲ್ಲಿಗೂ ಸೇರದೇ ಇರುವವರೇ ಭಾರತಕ್ಕೆ ಲಾಯಕ್ಕು ಅಂತಲೇ? ಇದು ಹಾಗಲ್ಲ.ಈ ದೇಶದ ರಾಜ್ಯಕ್ಕೆ ಸೇರಿಯೂ ಇಡೀ ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡವರು ಆಗಬೇಕು. ವಾಜಪೇಯಿ ಅವರಿಗೆ ಅಂತಹ ಶಕ್ತಿ ಇತ್ತು. ನೆಲದ ಮಟ್ಟದಲ್ಲಿ ಅವರು ಇದನ್ನು ತಿಳಿದುಕೊಂಡಿದ್ದರು.
     ಅಮೇರಿಕದಲ್ಲಿ ಇಂಡಸ್ಟ್ರಿ ಮೇಲೆ ಕೈ ಹಾಕೋ ಅಧಿಕಾರ ಸರ್ಕಾರಕ್ಕಿಲ್ಲ. ಅದಕ್ಕೆ ಅಲ್ಲಿ ಏನೇ ಒಂದು ಉದ್ಯಮ ಪ್ರಾರಂಭಿಸಬೇಕಾದರೆ venture fund ಅಂತ ಇರುತ್ತೆ. ಅಲ್ಲಿ ಪ್ಲ್ಯಾನ್ ತೋರಿಸಿದರೆ ಅವರು ಪರೀಕ್ಷೆ  ಮಾಡಿ ಅದು ವರ್ಕ್ ಔಟ್ ಆಗೋ ಹಾಗಿದ್ರೆ ಅವ್ರು ಅಂಗೀಕರಿಸುತ್ತಾರೆ. ಎಷ್ಟು ದುಡ್ಡು ಬೇಕೋ ತೊಗೋ ಅಂತ ಕೊಡ್ತಾರೆ. ಸೂಪರ್ ವಿಷನ್ ತಮ್ಮ ಕೈಯಲ್ಲೇ ಇಟ್ಟುಕೊಂಡಿರ್ತಾರೆ. ಹೀಗಾಗಿ ಅಲ್ಲಿ ಉದ್ಯಮಗಳು ಬೆಳೆಯುತ್ತವೆ. ನಮ್ಮಲ್ಲಿ ಆರಂಭದ ದೆಸೆಯಲ್ಲಿ ನಮ್ಮ ಎಕಾನಮಿಯನ್ನು ಕಮ್ಯೂನಿಸ್ಟ್ ಎಕಾನಮಿಯಾಗಿ ನೆಹರೂ ಅವರು ಆರಂಭ ಮಾಡಿದರು. ಪರಿನಾಮ ಏನಾಯಿತು ಅಂದರೆ ಪ್ರತಿಯೊಬ್ಬ ಉದ್ಯಮಿಗೂ ಸರ್ಕಾರವನ್ನೇ ಓಲೈಸುವ ಗತಿ ಬಂದಿತು. ಅದು ಇಂದಿರಾಗಾಂಧಿ ಕಾಲಕ್ಕೆ ರಾಜಕೀಯಕ್ಕೆ ತಿರುಗಿತು. ೯೭.೫%  ಹೈಯೆಸ್ಟ್ ಲೆವೆಲ್ ಇನ್ಕಮ್ಟ್ಯಾಕ್ಸ್ ಪ್ಲಸ್ ಸರ್ಚಾರ್ಜ್. ಇದರಿಂದಾಗಿ ಕಳ್ಳಲೆಕ್ಕ ಶುರುವಾಯಿತು. ಇಂದಿರಾಗಾಂಧಿಗೆ ಇದು ಗೊತ್ತಿರಲಿಲ್ವೇ? ಗೊತ್ತಿತ್ತು. ಅವರಿಗೆ ಪಾರ್ಟಿ ಫಂಡ್ ಸಿಗ್ತಿತ್ತು. ಆ ಕಾಲದಲ್ಲಿ ವಿರೋಧಿ ಪಕ್ಷದವರಿಗೆ ಬಾವುಟ ಕೊಳ್ಳಲು ಮೂರು ಕಾಸು ಇರ್ತಿರ್ಲಿಲ್ಲ. ಈ ಪಕ್ಷ ಎಲೆಕ್ಷನ್  ಮೇಲೆ ಎಲೆಕ್ಷನ್ ಗೆಲ್ಲುತ್ತಾ ವಿಜೃಂಭಿಸುತ್ತಲೇ ಬಂತು. ಪರಿಣಾಮ ನಮ್ಮ ಉದ್ಯಮಿಗಳಿಗೆ ಸರ್ಕಾರದ ವಿರೋಧ ಕಟ್ಟಿಕೊಂಡು ಬದುಕಲು ಆಗುವುದಿಲ್ಲ ಅನ್ನೋದು ಖಾತ್ರಿಯಾಯಿತು. ಈಗ ಸ್ವಲ್ಪ ಲಿಬರಲೈಸೇಶನ್ ನಿಂದ ಇದು ಸ್ವಲ್ಪ ಕಡಿಮೆಯಾಗಿದ್ದರೂ ಈಗಲೂ ಸರ್ಕಾರದ ವಿರೋಧ ಕಟ್ಟಿಕೊಳ್ಳಲು ನಮ್ಮ ಉದ್ಯಮಿಗಳು ಸಿದ್ಧವಿಲ್ಲ. ಅಮೇರಿಕದಲ್ಲಿ ಇದು ಇಲ್ಲ. ಅವರು ಯಾವ ಸರ್ಕಾರಕ್ಕೂ ಯಾವುದೇ ಪಾರ್ಟಿಗೂ ಅವರು ಕೇರ್ ಮಾಡೋಲ್ಲ.
     ಬ್ರಿಟನ್ ನಲ್ಲಿ ಹೌಸ್ ಆಫ್ ಲಾರ್ಡ್ಸ್ ಅಂತ ಇದೆ. ಲೋವರ್ ಹೌಸ್ ನಲ್ಲಿ ಏನೇನು ಚರ್ಚೆ ಆಗಿರುತ್ತೆ ಅದನ್ನೆಲ್ಲ ಎಕ್ಸ್ ಪರ್ಟ್ ಲೆವೆಲ್ ನಲ್ಲಿ ಅಲ್ಲಿನ ಅಪ್ಪರ್ ಹೌಸ್ ಚರ್ಚೆ ನಡೆಸುತ್ತೆ. ಅಲ್ಲಿ ಹೌಸ್ ಆಫ್ ಲಾ ಅಂತ ಇರುತ್ತೆ. ಅಲ್ಲಿ ಬೇರೆ ಬೇರೆಸೆಕ್ಷ್ಯನ್  ಇರುತ್ವೆ. ಸೀನಿಯರ್ ಮೋಸ್ಟ್ ಜಡ್ಜಸ್ ಆಗಿ ನಿವ್ರುತ್ತರಾದವರು ಅಥವಾ ದೊಡ್ಡ ದೊಡ್ಡ ವಕೀಲರಾಗಿ ಪ್ರಸಿದ್ಧರಾದವರಿಗೆ ಇಲ್ಲಿ ಹುದ್ದೆ ಕೊಡಲಾಗುತ್ತದೆ. ಇವರು ಎಂ.ಪಿಗೆ ಸಮಾನರು. ನಮ್ಮ ಕಾನೂನಿನಲ್ಲಿ ಏನು ಬದಲಾವಣೆ ಆಗಬೇಕು ಅನ್ನೋದಕ್ಕೆ ಅಲ್ಲಿ ಲಾ ಕಮಿಶನ್ ಅಂತ ಇರುತ್ತೆ. ಅಲ್ಲಿ ರೀಸರ್ಚ್ ಆಗ್ತಾನೇ ಇರುತ್ತೆ. ಅಲ್ಲಿ ಎಕನಾಮಿಸ್ಟ್ ಫ್ಯಾಮಿಲಿಗೆ ಸಂಬಂಧಪಟ್ಟವರು ಇರುತ್ತಾರೆ. ಕೋರ್ಟಿನಲ್ಲಿ ಏನೇನು ತೀರ್ಮಾನ ಆಗಿರುತ್ತದೊ ಅದೆಲ್ಲವನ್ನೂ ಅವರು ಚರ್ಚೆ ಮಾಡುತ್ತಿರುತ್ತಾರೆ. ಕಾನೂನಿಗೆ ಸಂಬಂಧಪಟ್ಟದ್ದನ್ನು ಮಾಡುವ ಅವರನ್ನು ಲಾ ಲಾರ್ಡ್ಸ್ ಅಂತ ಕರೀತಾರೆ.ಮಾಡಿದ ಕೆಲಸದಲ್ಲಿ ಏನು ಬದಲಾವಣೆ ಮಾಡಬೇಕು ಅನ್ನೋದನ್ನು ಅವರು ಪ್ರಧಾನಿಗೆ ಕೊಡ್ತಾರೆ. ಪ್ರಧಾನಿ ಅದನ್ನು ಓದಿ ಬದಲಾವಣೆ ಮಾಡ್ತಾರೆ.
   ಎಷ್ಟೋ ವಿಷಯಗಳಲ್ಲಿ ನಾವು degenerate ಆಗಿದ್ದೀವಿ ಅನಿಸುತ್ತದೆ. ಒಳ್ಳೆಯ ಸುಸಂಸ್ಕೃತ ಜನ ಭಾರತದಲ್ಲಿ ಇನ್ನೂ ಇದ್ದಾರೆ. ಆದರೆ ದೇಶದ ಜೀವನ ನೋಡಿದಾಗ ನಾವು ಬಹಳ degenerate ಸ್ಥಿತಿಯಲ್ಲಿದ್ದೇವೆ ಅನಿಸುತ್ತೆ. ಇದನ್ನು ಹೇಳಿದ್ರೆ ನಮ್ಮ 'ದೇಶಭಕ್ತ'ರಿಗೆ ಕೋಪ ಬಂದು ಬಿಡುತ್ತೆ. ಈಗಿನ ಸ್ಥಿತ್ಯಂತರಕ್ಕೆ ನಮ್ಮ ರಾಜಕಾರಣಿಗಳೇ ಕಾರಣ. ಈ ಮೊದಲು ನಮ್ಮ ಹಳ್ಳಿ ರೈತರು ಬೆಳಕು ಹರಿಯೋದ್ರೊಳಗೆ ಹೊಲಕ್ಕೆ ಹೋಗಿ ನೇಗಿಲು ಹೂಡಿ ಊಳೋರು, ಕೆಲಸ ಮಾಡೋರು. ಏಕೆಂದರೆ ನಮ್ಮದು ಉಷ್ಣ ದೇಶ. ಎಂಟು ಗಂಟೆಯೊಳಗೆ ಅವರಿಗೆ ಮನೆ ಜನ ಊಟಾ ತಂದು ಕೊಡೋರು. ಹನ್ನೆರಡು ಗಂಟೆಯೊಳಗೆ ಅವರು ಸಾಕಷ್ಟು ಕೆಲಸ ಮುಗಿಸಿಬಿಡೋರು. ಅದಕ್ಕೆ ಒಪ್ಪೊತ್ತಿನ ನೇಗಿಲು ಅಂತ ಇಂತಿಷ್ಟು ಕೂಲಿ ಕೊಡಲಾಗುತ್ತಿತ್ತು. ಇವತ್ತು ನಮ್ಮ ಹಳ್ಳಿಗಳು ಬಹಳ ಹಾಳಾಗಿವೆ ಅಂತಾರಲ್ಲ, ಇದಕ್ಕೆ ಬಹುತೇಕ ನಮ್ಮ ರಾಜಕಾರಣಿಗಳೇ ಕಾರಣ. ನಮ್ಮಲ್ಲಿ ಬಹುತೇಕ ಎಮ್.ಎಲ್.ಎಗಳು ಹಳ್ಳಿಯಿಂದ ಬಂದೋರೇ. ಆದರೆ ಇವರೇ election ಸಮಯದಲ್ಲಿ ಹಳ್ಳಿಗೆ ಹೋಗಿ ಕೆಲಸಗಾರರಿಗೆ, 'ಬೆಳ್ಳಂಬೆಳಿಗ್ಗೆ ಯಾಕೋ ಹೋಗ್ತೀಯಾ? ಹತ್ತು ಗಂಟೆಗೆ ಮೊದಲು ಪಟ್ಟಣದಲ್ಲಿ ಯಾರೂ ಕೆಲಸಕ್ಕೆ ಹೋಗೋದಿಲ್ಲ. ಕೂಲಿ ಒಂದು ದಿನಕ್ಕೆ ಇನ್ನೂರು ಇನ್ನೂರೈವತ್ತು ಕೊಡು ಅಂತ ಕೇಳೋ' ಅಂತಾ ಹೇಳಿ ಕೊಟ್ಟಿರ್ತಾರೆ. ಇದರಿಂದಾಗಿ ಒಂಭತ್ತು , ಹತ್ತು ಗಂಟೆಗೆ ಮೊದಲು ಬರೋದಿಲ್ಲ ಆಳುಗಳು. ಅದನ್ನೆಲ್ಲಾ ಹೇಳಿಕೊಡೋರು ಇದೇ ಜನಪ್ರತಿನಿಧಿಗಳು, ಎಮ್.ಎಲ್.ಎ ಗಳು. ಡಿಜನರೇಷನ್ ಗೆ ಕಾರಣವೇ ನಮ್ಮ ಜನನಾಯಕರು.
     ನನಗೆ ಗೊತ್ತಿರೋ ಒಂದು ಸಾಫ್ಟವೇರ್ ಕಂಪನಿಗೆ ನಮ್ಮ ರಾಜಕಾರಣಿಯೊಬ್ಬರು ಒಂದು ೭೫ಮಂದಿಯ ಹೆಸರು ಬರೆದು, 'ಇವರಿಗೆಲ್ಲ ಕೆಲಸ ಕೊಡಿ' ಅಂತ ಬರೆದಿದ್ದರು. ಅವರೆಲ್ಲ ಜಯಕಾರ ಹಾಕಲು ಮಾತ್ರ ಯೋಗ್ಯರೇ ವಿನಾ ಸಾಫ್ಟವೇರ್ ಕಂಪನಿಯಲ್ಲಿ ಏನು ಕೆಲಸ ಮಾಡ್ತಾರೆ? ಆವಾಗ ಕಂಪನಿಯವರು ಕೊಡೋಕಾಗೋಲ್ಲ ಅಂದ್ರು. ಅವರ ಮೇಲೆ ಈ ರಾಜಕಾರಣಿ ಈಗ ವಿಷಕಾರ್ತಿದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಉದ್ಧಾರ ಆಗೋದು ಹೇಗೆ ಸಾಧ್ಯ?
     ಈಗ ವಿಶ್ವ ಕನ್ನಡ ಸಮ್ಮೇಳನದಂಥ ಸಂದರ್ಭದಲ್ಲಿ ಮುಖ್ಯವಾದ ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಸಾಕು. ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ, ಕರ್ನಾಟಕದ ರಾಜಕೀಯ ಅಭಿವೃದ್ಧಿ ಕುರಿತು ಚರ್ಚೆ ಆಗ್ಬೇಕು. ಒಬ್ಬರ ಕಾಲು ಒಬ್ಬರು ಎಳೆಯೋದು ಬಿಟ್ಟು, ಪೊಲಿಟಿಕಲ್ ಮೆಚ್ಯೂರಿಟಿ ತೋರಿಸಬೇಕು. ಬ್ರಿಟನ್ ನಲ್ಲೂ ಇದೇ ಸನ್ನಿವೇಶ ಇದೆ. ಅಲ್ಲೂ coalition ಸರ್ಕಾರ ಇದೆ. ಆದರೆ ವಿರೋಧ ಪಕ್ಷ  ಆಡಲಿತ ಪಕ್ಷದ ಕಾಲು ಎಳೆಯಲು ಜನ ಬಿಡುವುದಿಲ್ಲ. ಕಾಲೆಳೆಯಲು ಹೋದರೆ 'ನೀನು ಆಡಳಿತ ನಡೆಸುವ ಮೆಜಾರಿಟಿ ನಿನ್ನಲ್ಲಿಲ್ಲ, ಸುಮ್ಮನಿರಯ್ಯಾ' ಅಂತ ದಬಾಯಿಸ್ತಾರೆ. ಈಗ ರಿಸೆಷನ್ ಸಂದರ್ಭದಲ್ಲಿ ಅಲ್ಲಿ ಎಷ್ಟು ಆರ್ಥಿಕ ಸಂಕಷ್ಟ ಇದೆ ಗೊತ್ತಾ? ಜಾಬ್ಸ್ ಕಟ್ ಮಾಡ್ತಾ ಇದ್ದಾರೆ .ಸಂಬಳ ಎಲ್ಲಾ ಕಡಿಮೆ ಮಾಡ್ತಾ ಇದ್ದಾರೆ. ಇಂಥ ಸ್ಥಿತಿಯಲ್ಲಿ ಸ್ಟೆಬಿಲಿಟಿ ಇಲ್ಲದೇ ಇದ್ದರೆ ದೇಶದ ಸ್ಥಿತಿ ಏನು ಅಂತಾ ಅಲ್ಲಿನ ಜನಗಳು, ಸರ್ಕಾರ, ಅಧಿಕಾರಿಗಳು, ಮೀಡಿಯಾದವರು ಎಲ್ಲ ಯೋಚನೆ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಅರಮನೆ ವಿದ್ಯುತ್ ಖರ್ಚನ್ನು ಕಡಿಮೆ ಮಾಡಬೇಕು ಅಂತಾ ಬ್ರಿಟನ್ ರಾಣಿಗೆ ಅಲ್ಲಿನ ಪ್ರಧಾನಿ ಪರ್ಸನಲ್ ಆಗಿ ಅಪೀಲ್ ಮಾಡಿದ್ದಾರೆ ಅಂದರೆ ತಿಳಿದುಕೊಳ್ಳಿ.
     ನಾವು ಯಾಕೆ ಮೆಚ್ಯೂರ್ ಆಗಿ ಯೋಚನೆ ಮಾಡಬಾರದು? ಇವತ್ತು ವಿಶ್ವ ಕನ್ನಡ ಸಮ್ಮೇಳನದಲ್ಲಿ ಚರ್ಚಿಸಬೇಕಾದದ್ದು - ಆರ್ಥಿಕ ಸದೃಡತೆ, ಅಭಿವೃದ್ಧಿ, ಅದಕ್ಕೆ ಬೇಕಾದಂಥ ವಾತಾವರಣ ಮತ್ತು ಸಹಕಾರ. ದುರಾದೃಷ್ಟವಷಾತ್ ನಮ್ಮಲ್ಲಿ ಬಹಳ ಮಟ್ಟದ ಹಣ ಕೇಂದ್ರದ ಹತ್ತಿರವಿದೆ. ಅಲ್ಲಿಂದ ಹಣ ಪಡೆಯಲು ಏನು ಮಾಡಬೇಕು? ಏನೇನು ಪಡೆಯಬೇಕು? ಅದನ್ನು ಪಡೆಯಲು ರಾಜಕೀಯ ಭಿನ್ನಾಭಿಪ್ರಾಯ ಬರಬಾರದು ಅನ್ನೋದರ ಮಟ್ಟಿಗೆ ಸಹಕಾರ ಕೊಡೋದರ ಬಗ್ಗೆ ಯೋಚಿಸಿದರೆ ಮತ್ತು ಸ್ಪಷ್ಟವಾಗಿ ಇದ್ದುಬಿಟ್ಟರೆ ಸಂಕಷ್ಟ ಬಾರದು ಅಂತ ನನ್ನ ಅನಿಸಿಕೆ. ಮನಿ ಪವರ್ ಇಲ್ಲದೇ ಹೋದರೆ ನಮ್ಮ ಧರ್ಮಾನೂ ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮ ಸಂಸ್ಕೃತಿನೂ ಉಳಿಸಿಕೊಳ್ಳಲು ಆಗುವುದಿಲ್ಲ. ಇದೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ವಿಶ್ವ ಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಮುಖ್ಯವಾಗಿ ಹಣ ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ದೊಡ್ಡ ದೊಡ್ಡ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ ಅನ್ನೋದೇ ಇಲ್ಲಿ ಮುಖ್ಯ.
    (ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆ 'ವಿಶ್ವ ಕನ್ನಡ ಸಮ್ಮೇಳನ'ದ ನಿಮಿತ್ತ  ಪ್ರಕಟಿಸಿದ್ದ 'ಕನ್ನಡ ಕಲರವ' ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ. ಸಂದರ್ಶನ ನಡೆಸಿದವರು: ಎಚ್.ಎಸ್.ನಾರಾಯಣ ಮೂರ್ತಿ,ವಿ.ಎನ್.ಸುಬ್ಬರಾವ್, ಹುಣಸವಾಡಿ ರಾಜನ್,ಜಿ.ಅನಿಲ್ ಕುಮಾರ್.ಇವರೆಲ್ಲರಿಗೂ ನನ್ನ ಧನ್ಯವಾದಗಳು )
                   
                                                                                          ಇಂತಿ ಎಲ್ಲರವ,
                                                                                    ಕಾಡಸಿದ್ಧೇಶ್ವರ ಕರಗುಪ್ಪಿ
                                                                                           ಹಿಡಕಲ್ ಡ್ಯಾಂ
                                                                                 

Sunday, April 17, 2011

ನನ್ನ ಬ್ಲಾಗಿನಲ್ಲಿ ಎಸ್.ಎಲ್.ಭೈರಪ್ಪನವರು!

     ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಲ್ಲೂ ಕೆಲವೊಂದು ಕನ್ನಡ ದಿನಪತ್ರಿಕೆಯವರು ಉಚಿತವಾಗಿ ತಮ್ಮ ಪತ್ರಿಕೆಗಳನ್ನು ವಿತರಿಸುತ್ತಾರೆ. ಅದೇ ರೀತಿ ಕಳೆದ ತಿಂಗಳು ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲೂ ಕೆಲವು ಕನ್ನಡ ಪತ್ರಿಕೆಗಳನ್ನು ವಿತರಿಸುತ್ತಿದ್ದರು. ಅವನ್ನು ತೆಗೆದುಕೊಂಡು ನಂತರ ಓದಿದರಾಯಿತು ಅಂತ ಇಟ್ಕೊಂಡಿದ್ದೆ. ಹಾಗೆ ತೆಗೆದುಕೊಂಡ ಪತ್ರಿಕೆಗಳ ಜೊತೆ ವಿಶ್ವ ಕನ್ನಡ ಸಮ್ಮೇಳನದ ನಿಮಿತ್ತ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯವರು ಹೊರತಂದಿದ್ದ ನೂರು ಪುಟಗಳ ವಿಶೇಷ ಪುಸ್ತಕ 'ಕನ್ನಡ ಕಲರವ'ವೂ ಇತ್ತು. ಅವತ್ತು ಅದನ್ನುತೆಗೆದು ಅದರಲ್ಲಿನ ಫೋಟೋಗಳನ್ನು ನೋಡಿ ನಂತರ ಅದನ್ನು ಓದಿದರಾಯಿತು ಅಂತ ಇಟ್ಟಿದ್ದೆ. ಅದನ್ನು ಮೊನ್ನೆ ತೆಗೆದು ನೋಡುತ್ತಿದ್ದಾಗ ಅದರಲ್ಲಿ ಪ್ರಕಟವಾದ ಎಸ್.ಎಲ್.ಭೈರಪ್ಪನವರ ಜೊತೆಗಿನ ಸಂವಾದ ನನಗೆ ಬಹಳ ಹಿಡಿಸಿತು. ಅದರ ಲಿಂಕ್ ಏನಾದರು ಸಂಯುಕ್ತ ಕರ್ನಾಟಕದ ವೆಬ್ ಸೈಟಲ್ಲಿ ಅಥವಾ ಎಸ್.ಎಲ್.ಭೈರಪ್ಪನವರ ವೆಬ್ ಸೈಟಲ್ಲಿ ಸಿಗುತ್ತದೋ ಅಂತಾ ನೋಡಿದೆ. ಸಿಗಲಿಲ್ಲ. ಹೀಗಾಗಿ ಅದನ್ನು ನಾನೇ ನನ್ನ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದುಕೊಂದು ನನ್ನ 'ವದನಹೊತ್ತಿಗೆ(facebook)'ಯ ಮಿತ್ರರು, ಸಂಯುಕ್ತ ಕರ್ನಾಟಕದ ವ್ಯಂಗ್ಯ ಚಿತ್ರಕಾರರು ಆದ ಡಾ.ಸತೀಶ್ ಶೃಂಗೇರಿಯವರಿಗೆ ಒಂದು ಮೆಸೇಜ್ ಕಳಿಸಿ, 'ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದಿದ್ದೇನೆ, ಇದಕ್ಕೆ copy rights ನಿಯಮಗಳೇನಾದರೂ ಅಡ್ಡಿಯಾಗತ್ತವೆಯೇ? ತಿಳಿಸಿ' ಎಂದು ಕೇಳಿದ ತಕ್ಷಣ, ಅವರು ಸಂಯುಕ್ತ ಕರ್ನಾಟಕದ ಸಂಪಾದಕರನ್ನು ಸಂಪರ್ಕಿಸಿ ನನಗೆ 'ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬಹುದು ಮುಂದುವರೆಯಿರಿ' ಎಂದು ಗ್ರೀನ್ ಸಿಗ್ನಲ್ ಕೊಟ್ಟರು!ಹೀಗಾಗಿ ಎಸ್.ಎಲ್.ಭೈರಪ್ಪನವರು ನನ್ನ ಬ್ಲಾಗ್ ಪ್ರವೇಶಿಸಲು ಪ್ರಮುಖ ಕಾರಣ ಸತೀಶ್ ಶೃಂಗೇರಿಯವರು! 'ಕನ್ನಡ ಕಲರವ' ಸಂಚಿಕೆಯಲ್ಲಿ ಅನೇಕ ಚಿತ್ರಗಳನ್ನು, ವ್ಯಂಗ್ಯ ಚಿತ್ರಗಳನ್ನು ರಚಿಸಿರುವುದರ ಜೊತೆಗೆ ಖ್ಯಾತ ವ್ಯಂಗ್ಯ ಚಿತ್ರಕಾರ, ಕನ್ನಡಿಗ ಆರ್.ಕೆ.ಲಕ್ಷ್ಮಣ್ ಅವರ ಚಿಕ್ಕ-ಚೊಕ್ಕ ವ್ಯಕ್ತಿಚಿತ್ರವನ್ನು ಸತೀಶ್ ಶೃಂಗೇರಿಯವರು ಬರೆದಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅದೇ ರೀತಿ ಭೈರಪ್ಪನವರ ಜೊತೆ ಸಂವಾದ ನಡೆಸಿದ ವಿ.ಎನ್.ಸುಬ್ಬರಾವ್, ಹುಣಸವಾಡಿ ರಾಜನ್, ಎಚ್.ಎಸ್.ನಾರಾಯಣಮೂರ್ತಿ ಮತ್ತು ಜಿ.ಅನಿಲ್ ಕುಮಾರ್ ಅವರಿಗೆ ನನ್ನ ಧನ್ಯವಾದಗಳು. 'ಕನ್ನಡ ಕಲರವ' ವಿಶೇಷ ಸಂಚಿಕೆ ಪ್ರಕಟಿಸಿದ್ದಕ್ಕಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು. ಎಸ್.ಎಲ್.ಭೈರಪ್ಪನವರಿಗೂ ಪ್ರೀತಿಪೂರ್ವಕ ಧನ್ಯವಾದಗಳು.
     ಕನ್ನಡ ಸಮ್ಮೇಳನ ಅಂತ ಕನ್ನಡ ಅಂದ್ರೆ ಹಾಗೆ, ಕನ್ನಡ ಅಂದ್ರೆ ಹೀಗೆ ಅಂತ ಪುಂಖಾನುಪುಂಖವಾಗಿ ಮಾತನಾಡೋ ಅನೇಕ ಸಾಹಿತಿಗಳಿದ್ದಾರೆ.ಕನ್ನಡದ ಬಹುತೇಕ ಖ್ಯಾತ ಸಾಹಿತಿಗಳ ಮಾತುಗಳನ್ನು ಅವರು quote ಮಾಡಬಲ್ಲರು. ಅದನ್ನು ತೆಗೆದುಕೊಂಡು ಮಾಡೋದೇನು? ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ ಬೆಳಗಾವಿ ನಮ್ಮದು ಅಂತ ಕಿರುಚಿ,ಕಿತ್ತೂರು ಚೆನ್ನಮ್ಮ,ಸಂಗೊಳ್ಳಿ ರಾಯಣ್ಣನಿಗೆ ಜೈಕಾರ ಹಾಕಿ ಎದ್ದು ಹೋದರೆ ಅದರಿಂದ ಏನು ಪ್ರಯೋಜನ?! ನಮ್ಮ ಕನ್ನಡ-ಕರ್ನಾಟಕಕ್ಕೆ ಅತ್ಯಂತ ತ್ವರಿತವಾಗಿ ಆಗಬೇಕಾಗಿರುವುದೇನು, ನಮ್ಮತನವನ್ನು ಉಳಿಸಿಕೊಳ್ಳಲು ನಾವು ಮಾಡಬೇಕಿರುವುದೇನು ಎಂಬ ಬಗ್ಗೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.ಕೇಳಿ.ನಿಮಗಿಷ್ಟವಾಗಬಹುದು.

                                                                                      ಇಂತಿ ಎಲ್ಲರವ,
                                                                                  ಕಾಡಸಿದ್ಧೇಶ್ವರ ಕರಗುಪ್ಪಿ
                                                                                       ಹಿಡಕಲ್ ಡ್ಯಾಂ

Tuesday, March 8, 2011

ಬನ್ನಿ ಬೆಳಗಾವಿಗೆ! ಕನ್ನಡೋತ್ಸವಕ್ಕೆ!!


     ಅಂತೂ ಇಂತೂ 'ನಮ್ಮ ಬೆಳಗಾವಿ'ಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ! 'ಇನ್ಫೋಸಿಸ್'ನ ಎನ್.ಆರ್.ನಾರಾಯಣ ಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು ನನಗಂತೂ ಖುಶಿಯಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ಯಾವುದೇ ಕನ್ನಡಿಗ ಸಹ ಕನ್ನಡ ಸಮ್ಮೇಳನ ಉದ್ಘಾಟಿಸಲು ಅರ್ಹ ಅನ್ನೋದು ನನ್ನ ಅಭಿಪ್ರಾಯ. ಪ್ರತೀ ಸಾಹಿತ್ಯ ಸಮ್ಮೇಳನಗಳಲ್ಲಂತು ಬರೀ ಸಾಹಿತಿಗಳದೇ ದರ್ಬಾರು, ಇನ್ನು ವರ್ಷಪೂರ್ತಿ ಸಭೆ ಸಮಾರಂಭಗಳಲ್ಲೇ ಜೀವನ ಸಾಗಿಸೋ ರಾಜಕಾರಣಿಗಳು, ಮಠಾದೀಶರನ್ನೂ ನೋಡಿ ನೋಡಿ ಸಾಕಾಗಿ ಹೋಗಿದೆ. ಕೆಲವೇ ಕೆಲವು ಮಠಾದೀಶರು, ರಾಜಕಾರಣಿಗಳನ್ನು ಬಿಟ್ಟರೆ ಬಹುತೇಕರದ್ದು ಅದೇ ಹಳಸಲು, ಬೋರಿಂಗ್ ಭಾಷಣ. ಹೀಗಾಗಿ ಇವರನ್ನು ಹೊರತುಪಡಿಸಿದವರೊಬ್ಬರು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ. ಇನ್ನು ನಾರಾಯಣ ಮೂರ್ತಿಗಳಿಗಿರುವ ಜಾಗತಿಕ ಮನ್ನಣೆಯಿಂದ ಸಮ್ಮೇಳನಕ್ಕೆ ತಕ್ಕ ಮೀಡಿಯಾ ಕವರೇಜೂ ಸಿಗುತ್ತದೆ. ಮತ್ತು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಐಶ್ವರ್ಯ ರೈ ಬಚ್ಚನ್ ಅವರ ಆಗಮನವಾಗಲಿದೆ!

'ವೀರ ಸೌಧ' ದಿಂದ ಮೆರವಣಿಗೆ:
  'ವೀರ ಸೌಧ' ಬೆಳಗಾವಿಯ ಐತಿಹಾಸಿಕ ಸ್ಥಳಗಳಲ್ಲೊಂದು. ೧೯೨೪ರಲ್ಲಿ ೩೯ನೇ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಇಲ್ಲಿಯೇ. ಮಹತ್ಮಾ ಗಾಂಧೀಜಿಯವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದು ಒಂದೇ ಸಲ. ಹೀಗಾಗಿ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ಎಂಬ ಖ್ಯಾತಿಗೆ ಈ ಸ್ಥಳ ಪಾತ್ರವಾಗಿದೆ. ಸಮ್ಮೇಳನಕ್ಕೆಂದು ತೆಗೆದ ನೀರಿನ ಬಾವಿಯನ್ನು ಕಾಂಗ್ರೆಸ್ ಬಾವಿಯೆಂದೇ ಕರೆಯುತ್ತಾರೆ(ಬಿ.ಜೆ.ಪಿಯವರೂ ಸಹ!).ಮಹತ್ಮ ಗಾಂಧಿಯವರ ಜೊತೆ ಮೊತಿಲಾಲ್ ನೆಹರು, ಜವಾಹರಲಾಲ್ ನೆಹರು, ಅನ್ನಿ ಬೆಸಂಟ್, ವಲ್ಲಭ ಭಾಯ್ ಪಟೇಲ್ ಮುಂತಾದವರಿದ್ದರು(ಅವತ್ತಿನ ಕಾಂಗ್ರೆಸ್ಸೇ ಹಾಗಿತ್ತು!). ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಸಹ ಇಲ್ಲಿನ ಐತಿಹಾಸಿಕ ಘಟನೆ.

      ಸಮ್ಮೇಳನದ ಪ್ರಧಾನ ಆಕರ್ಷಣೆ ಮಾರ್ಚ್ ೧೧ರಂದು ನಡೆಯುವ ಮೆರವಣಿಗೆ ಆಗಲಿದೆ. ಬೆಳಿಗ್ಗೆ ೧೦ ಗಂಟೆಗೆ 'ವೀರ ಸೌಧ'ದಿಂದ ಉದ್ಘಾಟಣಾ ಮೆರವಣಿಗೆ ಹೊರಡಲಿದೆ. ಪ್ರತಿ ಜಿಲ್ಲೆಯಿಂದ ಒಂದು ಸ್ಥಬ್ಧ ಚಿತ್ರ, ಬೆಳಗಾವಿ ಜಿಲ್ಲೆಯ ಹಿರಿಮೆ ಸಾರುವ ಐದು ಸ್ಥಬ್ಧಚಿತ್ರಗಳು, ಜನಪದ ಕಲಾ ತಂಡಗಳು, ಕನ್ನಡ ಚಲನಚಿತ್ರ ರಂಗದ ೫೦೦ ಜನ ಕಲಾವಿದರು, ನಟ-ನಟಿಯರ ಸಹಿತ ಒಂಭತ್ತು ಸ್ಥಬ್ಧಚಿತ್ರಗಳು, ಮೈಸೂರು ದಸರಾದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತ 'ಬಲರಾಮ'ನ ನೇತ್ರತ್ವದಲ್ಲಿ ಆನೆ, ಕುದುರೆ , ಒಂಟೆಗಳು, 'ಪೋಲೀಸ್  ಬ್ಯಾಂಡ್'ಗಳು, ೧೦೮ ಎತ್ತಿನ ಗಾಡಿಗಳು, ೧೦೦೮ ಮಂದಿ ಪೂರ್ಣ ಕುಂಬ ಹೊತ್ತ ಮಹಿಳೆಯರು! ಎಲ್ಲ ಒಟ್ಟಿಗೆ ಹೆಜ್ಜೆ ಹಾಕುಲಿದ್ದಾರೆ. ಹೀಗಾಗಿ ಉದ್ಘಾಟಣಾ ಮೆರವಣಿಗೆ ವೈಭವೋಪೇತವಾಗಿ, ಅವಿಸ್ಮರಣೀಯವಾಗಿ ನೆರವೇರುವುದರಲ್ಲಿ ಸಂಶಯವಿಲ್ಲ. ಯಾವುದೇ ಪ್ರಚಾರ, ಆಹ್ವಾನಗಳಿಲ್ಲದಿದ್ದರೂ ಪ್ರತೀ ವರ್ಷ ರಾಜ್ಯೋತ್ಸವದಲ್ಲಿ ಬೆಳಗಾವಿಯಲ್ಲಿ ಸಾವಿರಾರು ಜನ ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಸೇರುತ್ತಾರೆ. ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೈಗೊಂಡಿರುವಾಗ ಯಾವ ಪ್ರಮಾಣದಲ್ಲಿ ಜನ ಸೇರಬಹುದೆಂಬುದನ್ನು ಯಾರಾದರೂ ಊಹಿಸಬಹುದು.
ಬೆಳಗಾವಿಯ ಗೋಡೆಗಳನ್ನೆಲ್ಲ ಅದ್ಭುತವಾಗಿ ಅಲಂಕರಿಸಿದ ಕಲಾವಿದರಿಗೆಲ್ಲ ಸಲಾಂ 


ಪುಸ್ತಕ ಪ್ರದರ್ಶನ:
     ನಾನು ಕಾತರದಿಂದ ಕಾಯುತ್ತಿರುವುದು ಪುಸ್ತಕ ಪ್ರದರ್ಶನಕ್ಕೆ. ಬೆಳಗಾವಿದೆ ವಿಧಾನ ಸೌಧ ಬಂದರೂ ಒಂದು ಸುಸಜ್ಜಿತ ಕನ್ನಡ ಪುಸ್ತಕ ಮಳಿಗೆ ಇಲ್ಲದಿರುವುದು ದೊಡ್ದ ದುರಂತ! ಪುಸ್ತಕ ಪ್ರದರ್ಶನ ನಮ್ಮ ಆರ್.ಎಲ್.ಎಸ್ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಲಿದೆ.
ಪ್ರಧಾನ ವೇದಿಕೆಯ ಮಾದರಿ 


ಅಂತಿಮ ಹಂತದಲ್ಲಿ ಪ್ರಧಾನ ವೇದಿಕೆಯ ಸಿದ್ಧತೆ 

ಪ್ರವಾಸ :
     ಬೆಳಗಾವಿ ನಗರದಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳೆಂದರೆ ವೀರಸೌಧ, ಕೋಟೆ ಪ್ರದೇಶದಲ್ಲಿರುವ ರಾಮಕ್ರಿಷ್ಣ ಮಿಶನ್ ಆಶ್ರಮ (೧೮೯೨ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮೊದಲನೇ ದಕ್ಶಿಣ ಭಾರತದ ಪ್ರವಾಸದ ವೇಳೆ ಅಕ್ಟೋಬರ್ ೧೯ರಿನಂದ ಅಕ್ಟೋಬರ್ ೨೭ರವರೆಗೆ ೯ ದಿನ ಇಲ್ಲಿ ತಂಗಿದ್ದರು.೧೮೯೩ರ ಚಿಕಾಗೋದ ವಿಶ್ವ ಸರ್ವ ಧರ್ಮ ಸಮ್ಮೇಳನಕ್ಕೆ ಹೋಗುವ ವಿಚಾರ ಸ್ವಾಮಿ ವಿವೇಕಾನಂದರಲ್ಲಿ ಮೊಳಕೆಯೊಡೆದಿದ್ದು ಇಲ್ಲಿಯೇ ಎಂದು ನಂಬಲಾಗಿದೆ.), ಅದರ ಮುಂದುಗಡೆ ಇರುವ ಪುರಾತನ ಕಮಲ ಬಸದಿ, ಕೋಟೆ ಕೆರೆ. ಪಕ್ಷಿ ವೀಕ್ಷಣೆ, ಟ್ರೆಕ್ಕಿಂಗ್ ಗೆ ಹೋಗೊರಿದ್ರೆ ಬೆಳಗಾವಿಯ ವ್ಯಾಕ್ಸಿನ್ ಡೀಪೊ ಪ್ರದೇಶ, ಸಮೀಪದ ಬುತ್ತರಾಮಟ್ಟಿಯ ಕಿರು ಮ್ರುಗಾಲಯದ ಹತ್ತಿರದ ಗುಡ್ಡಕ್ಕೆ ಹೋಗಬಹುದು. ಕಿತ್ತೂರು ಕೋಟೆ, ನವಿಲು ತೀರ್ಥ, ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ, ನಮ್ಮ 'ಹಿಡ್ಕಲ್ ಜಲಾಶಯ', ದೂದಸಾಗರ ಜಲಪಾತ, ವಜ್ರ ಜಲಪಾತ, ಆಸೋಗಾ ಜಲಪಾತ ಬೆಳಗಾವಿಯ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಸ್ಥಳಗಳು. ಸಮೀಪದ ಮಹಾರಾಷ್ಟ್ರದ ಅಂಬೋಲಿ ಘಾಟಿಗೂ ಭೇಟಿ
ನೀಡಬಹುದು. ಗೋವಾ ಸಹ ಬೆಳಗಾವಿಗೆ ನೂರೈವತ್ತು ಕಿ.ಮೀ ದೂರದಲ್ಲಿದೆ.
ಬೆಳಗಾವಿಯ ರಾಮಕೃಷ್ಣ ಮಿಶನ್ ಆಶ್ರಮ 

ಸ್ವಾಮೀ ವಿವೇಕಾನಂದರು ತಂಗಿದ್ದ ಮನೆ(ಈಗ ನವೀಕರಿಸಲಾಗಿದೆ)  


ನಮ್ಮ ಹಿಡಕಲ್ ಜಲಾಶಯ 

ಗೋಕಾಕ್ ಜಲಪಾತ 

ಗೊಡಚಿನಮಲ್ಕಿ ಜಲಪಾತ 

ಎಡವಿದ ಸರ್ಕಾರ:
ಸಮ್ಮೇಳನದ ದಿನಾಂಕವನ್ನು ಸ್ವಲ್ಪ ಮುಂಚೆಯೇ ನಿರ್ಧರಿಸಿದ್ದರೆ ಇನ್ನೂ ಹೆಚ್ಚಿನ ಕೆಲಸಗಳು ಬೆಳಗಾವಿಯಲ್ಲಿ ನಡೆಯುತ್ತಿದ್ದವೇನೋ. ಬೆಳಗಾವಿ ನಗರದ ಮೂಲಭೂತ ಸೌಕರ್ಯಗಳಿಗಾಗಿ ವಿಶೇಷಾನುದಾನ ಅಂತ ೧೦೦ಕೋಟಿಗಳನ್ನು ಯಡಿಯೂರಪ್ಪನವರು ಬಿಡುಗಡೆ ಮಾಡಿದ್ರು. ವಿಶ್ವ ಕನ್ನಡ ಸಮ್ಮೇಳನಕ್ಕೆ ಅಂತ ೩೦ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ಇನ್ನು ಮಹಾನಗರ ಪಾಲಿಕೆ, ನಗರಾಭಿವ್ರುದ್ಧಿ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ ಇವೆಲ್ಲ ಕೂಡಿ ಕೆಲಸ ಮಾಡಿದ್ದರೆ ಬೆಳಗಾವಿಯಲ್ಲಿ ಮೆರವಣಿಗೆ ಹೋಗೋ ದಾರಿಯನ್ನಾದರೂ ಕಾಂಕ್ರೀಟ್ ರಸ್ತೆಯಾಗಿ ಮಾಡಬಹುದಿತ್ತು. ಇನ್ನು ಗೋಡೆಗಳಿಗೆ ಕಲಾವಿದರಿಂದ ಚಿತ್ರ ಬರೆಸಿದಂತೆ 'ಪ್ಲಾಸ್ಟಿಕ್ ಬ್ಯಾನರ್'ಗಳಿಗೆ ಬದಲಾಗಿ ಅವನ್ನೂ ಕಲಾವಿದರಿಂದ ಬರೆಸಿದ್ದರೆ ಪರಿಸರ ಸ್ನೇಹಿ ಕೆಲಸವೂ ಆಗುತ್ತಿತ್ತು, ಕಲಾವಿದರಿಗೆ ಸಹಾಯ ಮಾಡಿದ ಹಾಗೂ ಆಗುತ್ತಿತ್ತು. ಇನ್ನು ಸಮ್ಮೇಳನದ ಪ್ರಯುಕ್ತ ಹೊಸ ವೆಬ್ಸೈಟು ಆರಂಭಿಸಬೇಕಿತ್ತು. ಇರುವ ಬೆಳಗಾವಿಯ ವೆಬ್ಸೈಟಲ್ಲೆ ಸಮ್ಮೇಳದ ವೆಬ್ಸೈಟ್ ಅಳವಡಿಸಲಾಗಿದೆ. ಅದೂ ಹೇಳಿಕೊಳ್ಳುವ ಗುಣಮಟ್ಟದ್ದಾಗಿಲ್ಲ. ಅದನ್ನೂ ಜಾಹೀರಾತುಗಳಲ್ಲಿ ನೀಡದೇ ಇದ್ದಿದ್ದರಿಂದ ಬಹಳಷ್ಟು ಜನರಿಗೆ ವೆಬ್ಸೈಟ್ ಇರುವುದು ಗೊತ್ತಾಗಿಲ್ಲ. ಸಮ್ಮೇಳನಗಳನ್ನು ನಡೆಸುವ ಬಗ್ಗೆ ನಮ್ಮ ದೇಶದ ಉಳಿದ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಗುಜರಾತಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ!

ಬೇಜಾರು:
     ಮರೆತಿಲ್ಲದಿದ್ದರೂ ವಿಶ್ವ ಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಪದೇ ಪದೇ ನೆನಪಾಗುತ್ತಿರುವುದು ಸಿ.ಅಶ್ವತ್ಥ್ ಅವರು! ಅವರಿದ್ದಿದ್ದರೆ ಸಮ್ಮೇಳನದ ಹೊಳಪೇ ಬೇರೆ ಇರುತ್ತಿತ್ತು. ಬಹುಶಃ ಲೋಕಾಯುಕ್ತರಾದ ಸಂತೋಷ ಹೆಗ್ಡೆಯವರು ಆಗಮಿಸುತ್ತಿಲ್ಲ!
ಸಿ.ಅಶ್ವತ್ಥ್ ಅವ್ರಿರ್ಬೇಕಿತ್ತು! 


ಸರ್ಕಾರಕ್ಕೆ ಅಭಿನಂದನೆ :
     ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಮೊದಲು ಪ್ರಸ್ತಾಪ ಆದದ್ದು ಕುಮಾರ ಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರವಿದ್ದಾಗ. ಆಗಿಂದ ಸಮ್ಮೇಳನದ ದಿನವನ್ನು ಮೂಂದೂಡುತ್ತಿರುವುದರಿಂದ ಬೆಳಗವಿಗೆ ಆದ ಉಪಯೋಗ ಬಹಳಷ್ಟು! ಈ ಮೊದಲು ಬೆಳಗಾವಿಯಲ್ಲಿ ಸಮ್ಮೇಳನದ ದಿನಾಂಕ ನಿರ್ಧಾರವಾಗುತ್ತಿದ್ದಂತೆ ರಸ್ತೆಗಳಲ್ಲಿ 'ಡಿವೈಡರ್ಗ'ಳನ್ನು ಮಾಡಿ ಮಧ್ಯೆ ಗಿಡ ಬೆಳೆಸಲು ಶುರು ಮಾಡಿದ್ರು. ಅವುಗಳ ಮಧ್ಯೆ ಇದ್ದ ಏರ್ಟೆಲ್ ಜಾಹೀರಾತುಗಳು ಇಂಗ್ಲೀಷಿನಲ್ಲಿದ್ದವು. ಸಮ್ಮೇಳನದ ಕೆಲಸ ಶುರುವಾದ ತಕ್ಷಣ ಅವನ್ನು ತೆಗೆದು ಮೇಲೆ ಕನ್ನಡದಲ್ಲಿ ಬರೆದು ಕೆಳಗೆ ಸಣ್ಣ ಅಕ್ಷರಗಳಲ್ಲಿ ಇಂಗ್ಲೀಷಿನಲ್ಲಿ ಬರೆಸಿ ಹಾಕಿಸಿದ್ದರು! ಇನ್ನು ಸಮ್ಮೇಳನ ಮುಂದೂಡಿದ್ದರಿಂದ ಬೆಳಗಾವಿ ರಸ್ತೆಗಳು ಮತ್ತೆ ಮತ್ತೆ ಡಾಂಬರೀಕರಣಗೊಂಡವು! ಹೊಸ ಫುಟ್ ಪಾತುಗಳು ನಿರ್ಮಾಣಗೊಂಡವು. ಸಮ್ಮೇಳನದ ನೆಪದಲ್ಲಿ ನಡೆಯುತ್ತಿರುವ ಕೆಲಸಗಳಿಂದ ಸಾವಿರಾರು ಜನರಿಗೆ ಕೆಲಸ ದೊರೆತಿದ್ದು ಸಮ್ಮೇಳನದ ಯಶಸ್ಸೆಂದೇ ನನ್ನ ಅನಿಸಿಕೆ. ಹೀಗಾಗಿ ಸರ್ಕಾರಕ್ಕೆ ಅಭಿನಂದನೆ ಹೇಳಲೇಬೇಕು.

ಮುಂದಿನ ಸಮ್ಮೇಳನದವರೆಗೂ ಕಾಯದಿರಿ!
     ಕರ್ನಾಟಕ ಏಕೀಕರಣದ ನಂತರ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನವಿದು. ಈ ಮೊದಲು ೧೯೮೫ರಲ್ಲಿ ಮೈಸೂರಿನಲ್ಲಿ ಮೊದಲ ’ಶ್ವ ಕನ್ನಡ ಸಮ್ಮೇಳನ’ ಡೆದಿತ್ತು. ಅದನ್ನು ಉದ್ಘಾಟಿಸಿದ್ದು ನಮ್ಮ ಶಿವರಾಮ ಕಾರಂತರು!(ಆಗ ಬರಗಾಲ ಇದ್ದಿದ್ದರಿಂದ ಕೆಲವರು ಕಾರಂತರಿಗೆ ಪತ್ರ ಬರೆದು ಸಮ್ಮೇಳನಕ್ಕೆ ಬರಬೇಡಿ ಎಂದು ಪತ್ರಬರೆದಿದ್ದರಂತೆ. ಸಮ್ಮೇಳನದಲ್ಲಿ ಪಾಲ್ಗೊಂಡು ಅದನ್ನು ಪ್ರಸ್ತಾಪಿಸಿ "ಬರ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರೆಯೇ?!" ಅಂತ ಐತಿಹಾಸಿಕ ಹೇಳಿಕೆ ಕೊಟ್ಟಿದ್ದರಂತೆ!) ೨೫ ವರ್ಷಗಳ ನಂತರ  ಬೆಳಗಾವಿಯಲ್ಲಿ  ಎರಡನೆಯ ವಿಶ್ವ ಕನ್ನಡ ಸಮ್ಮೇಳನ  ನಡೆಯುತ್ತಿದೆ. ಮುಂದೆ ಯಾವಾಗ ನಡೆಯುತ್ತೋ ಯಾರಿಗ್ಗೊತ್ತು?! ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡೋತ್ಸವಕ್ಕೆ ತಪ್ಪದೇ ಬನ್ನಿ!

     ಸಮಸ್ತ ಕನ್ನಡಿಗರಿಗೆ ಬೆಳಗಾವಿಗೆ ಹೃತ್ಪೂರ್ವಕ ಸ್ವಾಗತ!!


                                                                       ಇಂತಿ ಎಲ್ಲರವ,
                                                                 ಕಾಡಸಿದ್ಧೇಶ್ವರ ಕರಗುಪ್ಪಿ
                                                                       ಹಿಡಕಲ್ ಡ್ಯಾಂ